ಕಲಬುರಗಿ: ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಪರೀಕ್ಷೆ ನವೆಂಬರ್ 5ಕ್ಕೆ ನಡೆಯಬೇಕಿತ್ತು ಆದರೆ ನ. .19ಕ್ಕೆ ಪರೀಕ್ಷೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯ ಲೋಕಸೇವಾ ಆಯೋಗವು ಲೆಕ್ಕ ಪರಿಶೋಧನಾ ಮತ್ತು ಲೆಕ್ಕ ಸಹಾಯಕರ ಹಾಗೂ ರಾಜ್ಯ ಪೊಲೀಸ್ ಇಲಾಖೆಯ ಖಾಲಿ ಇರುವ ಹುದ್ದೆಗಳಿಗೆ ಒಂದೇ ದಿನ (ನ.5) ಲಿಖಿತ ಪರೀಕ್ಷೆ ನಿಗದಿ ಪಡಿಸಿತ್ತು. ಇದರಿಂದ ಸಾವಿರಾರು ಅರ್ಹ ಅಭ್ಯರ್ಥಿಗಳಿಗೆ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಹೆಚ್ಚಿನ ಅನನುಕೂಲವಾಗುತ್ತಿತ್ತು. ಪರೀಕ್ಷೆಯ ದಿನಾಂಕ ಬದಲಾಯಿಸುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ನೇಮಕಾತಿ ಸಮನ್ವಯ ಅಧಿಕಾರಿ ಯಡಾ ಮಾರ್ಟನ್ ಹಾಗೂ ಡಿಜಿಪಿ ಕಮಲ್ ಪಂತ್ ಅವರೊಂದಿಗೆ ಗುರುವಾರ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದೆ. ಹೀಗಾಗಿ, ಕಾನ್ಸ್ಟೆಬಲ್ ಪರೀಕ್ಷೆಯ ದಿನಾಂಕ ಮುಂದೂಡಿ ಆದೇಶ ಹೊರಡಿಸಿದೆ ಎಂದಿದ್ದಾರೆ.