ಸಿಹಿ ಸಿಹಿಯಾಗಿರುವ ಸೀತಾಫಲ ಹಣ್ಣಿನಲ್ಲಿ ವಿಟಮಿನ್, ಮೆಗ್ನೀಷಿಯಂ, ಪೊಟಾಷಿಯಂ, ಫೈಬರ್, ವಿಟಮಿನ್ ಬಿ6, ಕಾಲ್ಷಿಯಂ, ಐರನ್‌ನಂತಹ ಅನೇಕ ಪೋಷಕಾಂಶಗಳಿವೆ. ಈ ಹಣ್ಣನ್ನು ನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ಎಷ್ಟೋ ಕಾಯಿಲೆಗಳಿಂದ ರಕ್ಷ ಣೆ ಪಡೆದುಕೊಳ್ಳಬಹುದು. ಹಣ್ಣು ಮಾತ್ರವಲ್ಲ ಇದರ ಎಲೆಗಳು, ಬೇರು, ಕಾಂಡದಿಂದಲ್ಲೂ ಅನೇಕ ಉಪಯೋಗಗಳಿವೆ. ಪ್ರತಿದಿನ ಬೆಳಗ್ಗೆ ಸೀತಾಫಲದ ಎಲೆಯ ರಸವನ್ನು ಒಂದು ಟೀ ಸ್ಪೂನ್‌ನಷ್ಟು ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ತೂಕವೂ ಕಡಿಮೆಯಾಗುತ್ತದೆ. ಸೀತಾಫಲ ಎಲೆಗಳನ್ನು ನೀರಿಗೆ ಹಾಕಿ ಕಷಾಯ ಮಾಡಿ ಕುಡಿದರೆ ನೆಗಡಿ ಕಡಿಮೆಯಾಗುತ್ತದೆ. ಸೀತಾಫಲವನ್ನು ಬೆಳಗ್ಗೆ ಉಪಹಾರಕ್ಕೆ ಸೇವಿಸಿದರೆ ನರಗಳ ಬಲಹೀನತೆ ನಿವಾರಣೆಯಾಗುತ್ತದೆ. ಶರೀರಕ್ಕೆ ಶಕ್ತಿ ದೊರೆಯುತ್ತದೆ. ಇದರಲ್ಲಿ ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ದೃಷ್ಟಿ ಸಮಸ್ಯೆಗಳನ್ನು ದೂರ ಮಾಡುತ್ತದೆ. ಸೀತಾಫಲದಲ್ಲಿರುವ ಮೆಗ್ನೀಷಿಯಂ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ. ಈ ಹಣ್ಣನ್ನು ಪ್ರತಿದಿನ ತಿನ್ನುವುದರಿಂದ ಅಲ್ಸರ್ ವಾಸಿಯಾಗುತ್ತದೆ. ಗ್ಯಾಸ್, ಆ್ಯಸಿಡಿಟಿ, ಅಜೀರ್ಣ, ಮಲಬದ್ಧತೆ ಸಮಸ್ಯೆಗಳನ್ನು ಹೊಗಲಾಡಿಸುತ್ತದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಿರುವವರು ಸೀತಾಫಲ ಹಣ್ಣನ್ನು ತಿನ್ನುವುದು ಒಳ್ಳೆಯದು. ಇದರಿಂದ ಹೆಚ್ಚು ರಕ್ತ ಉತ್ಪತ್ತಿಯಾಗುತ್ತದೆ. ಶರೀರದಲ್ಲಿ ಉಷ್ಣಾಂಶ ಹೆಚ್ಚು ಇರುವವರು ಸೀತಾಫಲ ಸೇವಿಸಿದರೆ ದೇಹ ತಂಪಾಗುತ್ತದೆ. ಚಿಕ್ಕ ಮಕ್ಕಳು, ಬಾಣಂತಿಯರು ಸೀತಾಫಲ ಸೇವಿಸುವುದರಿಂದ ಉತ್ತಮ ಪೋಷಕಾಂಶ ಸಿಗುತ್ತದೆ. ಬೆಳೆಯುವ ಮಕ್ಕಳಿಗೆ ಪ್ರತಿದಿನ ಸೀತಾಫಲ ತಿನ್ನಿಸಿದರೆ ಅವರಿಗೆ ಕ್ಯಾಲ್ಷಿಯಂ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ.