ಬೆಂಗಳೂರು: ಕನ್ನಡದ ಸೀರಿಯಲ್ ನಟಿ ಲೀವ್ ಇನ್ ರಿಲೇಶನ್‌ನಲ್ಲಿದ್ದು ಕೊನೆಗೆ ಮದುವೆಗೆ ನಿರಾಕರಿಸಿದ್ದಕ್ಕೆ ಆಕೆಯ ಮನೆಯಲ್ಲೇ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಮೃತನ ಪೋಷಕರು ನೀಡಿದ ದೂರು ಆಧರಿಸಿ ಯುವತಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮದನ್ (25) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾರೆ. ಹುಳಿಮಾವಿನ ಸಿ.ಕೆ.ಪಾಳ್ಯದಲ್ಲಿ ವಾಸವಾಗಿದ್ದ ಮದನ್ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಸಾವಿಗೆ ವೀಣಾ ಎಂಬಾಕೆಯೇ ಕಾರಣ ಎಂದು ಪೋಷಕರು ನೀಡಿದ ದೂರಿನ ಮೇರೆಗೆ ಆಕೆಯನ್ನ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕನ್ನಡದ ಹಲವು ಧಾರವಾಹಿಗಳಲ್ಲಿ ನಟಿಯಾಗಿ ವೀಣಾ ನಟಿಸುತ್ತಿದ್ದಳು ಎನ್ನಲಾಗಿದೆ. ಕೆಲ ತಿಂಗಳ ಹಿಂದೆ ಕೋಣನಕುಂಟೆಯಲ್ಲಿದ್ದ ಮನೆಯನ್ನ ಹುಳಿಮಾವಿಗೆ ಶಿಫ್ಟ್ ಮಾಡಿದ್ದಳು. ಮದನ್ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯಲ್ಲಿ ಕೆಲಸ ಮಾಡುವುದಲ್ಲದೆ, ಹಲವು ಸೀರಿಯಲ್‌ಗಳಲ್ಲಿ ಡೆಕೋರೆಷನ್ ಹಾಗೂ ಸೆಟ್ ಹಾಕುವ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಯುವತಿಯ ಪರಿಚಯವಾಗಿ ಕ್ರಮೇಣ ಪ್ರೀತಿಗೆ ತಿರುಗಿತ್ತು. ಇಬ್ಬರು ಲಿವಿಂಗ್ ಟೂ ಗೆದರ್ ಸಂಬಂಧದಲ್ಲಿದ್ದರು. ನಿನ್ನೆ ರಾತ್ರಿ ಯುವತಿಯ ಮನೆಯಲ್ಲಿ ಇಬ್ಬರು ಸೇರಿ ಮದ್ಯದ ಪಾರ್ಟಿ ಮಾಡಿದ್ದಾರೆ. ಬಳಿಕ ಮದುವೆ ಮಾಡಿಕೊಳ್ಳುವಂತೆ ಮದನ್ ನಿವೇದಿಸಿಕೊಂಡಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಳು. ಇದರಿಂದ ಮನನೊಂದು ಮದನ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಯುವತಿ ಮತ್ತೋರ್ವ ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಇದರ ಮಧ್ಯಸಿಕೆಯನ್ನ ಮದನ್ ವಹಿಸಿದ್ದ. ಅನ್ಯ ಕಾರಣಕ್ಕಾಗಿ ಯುವಕನನ್ನ ತೊರೆದಿದ್ದಳು. ಈ ವೇಳೆ ಯುವತಿಯೊಂದಿಗೆ ಮದನ್ ಅಫೇರ್ ಇಟ್ಟುಕೊಂಡು ಲಿವಿಂಗ್ ಟೂ ಗೆದರ್ ರಿಲೇಷನ್ ನಲ್ಲಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಮೃತನ ಪೋಷಕರು, ಮದುವೆಯಾಗುವುದಾಗಿ ಮದನ್ ವಂಚಿಸಿದ್ದಾಳೆ. ಇದೇ ರೀತಿ ಹಲವು ಮಂದಿಗೆ ಮೋಸ ಮಾಡಿದ್ದಾಳೆ. ಅಲ್ಲದೆ, ಜಾತಿ ನಿಂದನೆ ಕೂಡ ಮಾಡಿದ್ದಾಳೆ ದೂರಿನಲ್ಲಿ ತಿಳಿಸಿದ್ದಾರೆ. ಜಾತಿನಿಂದನೆಯಡಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಎಸಿಪಿ ತನಿಖೆ ನಡೆಸಲಿದ್ದಾರೆ ಎಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.
