ತಮಿಳುನಾಡು: ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಎಲ್ಲಾ ಮನೆ-ಮನಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಆದರೆ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಯಾವ ಸಮಯದಲ್ಲಿ ಸಿಡಿಸಬೇಕು, ಯಾವ ಪಟಾಕಿಯನ್ನು ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಕೆಲವು ನಿಯಮ ಹಾಗೂ ಮಾರ್ಗ ಸೂಚಿಗಳನ್ನು ನೀಡಿದೆ. ಆದರೆ ಜನ ಅದನ್ನು ಗಾಳಿಗೆ ತೂರಿ ಪಟಾಕಿ ಸಿಡಿಸಿದ್ದಾರೆ. ಹೀಗಾಗಿ ಸುಮಾರು 581ಕ್ಕೂ ಹೆಚ್ಚು ಜನರ ವಿರುದ್ದ ಚೆನ್ನೈ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಪೈಕಿ 554 ಪ್ರಕರಣಗಳು ಸುಪ್ರೀಂ ಕೋರ್ಟ್ ಆದೇಶವನ್ನೂ ಮೀರಿ ಪಟಾಕಿಯನ್ನು ಸಿಡಿಸಿದ್ದಕ್ಕೆ ಎನ್ನಲಾಗಿದೆ.
ತಮಿಳುನಾಡು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಪಟಾಕಿ ಅಂಗಡಿ ನಡೆಸುತ್ತಿದ್ದ ಎಂಟು ಮಂದಿ ಪಟಾಕಿ ಅಂಗಡಿ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ . ಅತಿಯಾದ ಶಬ್ದವುಳ್ಳ ಪಟಾಕಿ ಸಿಡಿಸಿದ 19 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನು ಚೆನ್ನೈನಲ್ಲಿ ಬೆಳಿಗ್ಗೆ 6 ರಿಂದ 7 ರವರೆಗೆ ಮತ್ತು ಮತ್ತೆ ಸಂಜೆ 7 ರಿಂದ ರಾತ್ರಿ 8 ರವರೆಗೆ ಎರಡು ಗಂಟೆಗಳ ಕಾಲ ಪಟಾಕಿ ಸಿಡಿಸಲು ಅನುಮತಿಸಲಾಗಿದೆ. ಈ ಸಂಬಂಧ ಯಾರೇ ಕಾನೂನು ಉಲ್ಲಂಘಿಸಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.