ಬೆಂಗಳೂರು : ಹನ್ನೆರಡು ವರ್ಷಗಳ ಹಿಂದೆ ನಡೆದ ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಪ್ರೊ.ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಾಜ್ಯ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಐದು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಹೈಕೋರ್ಟ್ ನ್ಯಾಯಾಧೀಶರು ಇಂದು ತೀರ್ಪು ಪ್ರಕಟಿಸಿದ್ದಾರೆ.
ಪ್ರೊ.ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ವಾರದ ಹಿಂದೆ ರದ್ದುಗೊಳಿಸಿದ್ದ ಹೈಕೋರ್ಟ್ ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿತ್ತು. ಡಾ.ರೇಣುಕಾ ಪ್ರಸಾದ್ ಕೆ.ವಿ. ಸೇರಿದಂತೆ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ ಐದನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಶ್ರೀನಿವಾಸ್, ಹರೀಶ್ ಕುಮಾರ್ ಅವರಿದ್ದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಸೆ.27ರಂದು ಈ ಆದೇಶ ನೀಡಿತ್ತು.
ವೀಡಿಯೋ ಕಾನ್ಪರೆನ್ಸ್ ಮೂಲಕ ಹೈ ಕೋರ್ಟ್ ನ್ಯಾಯಾಧೀಶರು ಅಪರಾಧಿಗಳ ಅಹವಾಲು ಆಲಿಸಿ ಬಳಿಕ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ಅಪರಾಧಿಗಳಾದ ಡಾ.ರೇಣುಕಾಪ್ರಸಾದ್, ಮನೋಜ್ ರೈ, ಎಚ್.ಆರ್.ನಾಗೇಶ್, ವಾಮನ್ ಪೂಜಾರಿ, ಭವಾನಿಶಂಕರ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಲಾಯಿತು. ಇಂದು ಹಾಜರಾಗದ ಶರಣ್ ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿಲ್ಲ. ಡಾ.ರೇಣುಕಾ ಪ್ರಸಾದ್ ಅವರಿಗೆ 10 ಲಕ್ಷ ರೂ. ದಂಡವೂ ವಿಧಿಸಲಾಗಿದ್ದು, ಅದನ್ನು ಕೊಲೆಗೀಡಾದ ರಾಮಕೃಷ್ಣ ಕುಟುಂಬಕ್ಕೆ ನೀಡುವಂತೆ ಆದೇಶಿಸಲಾಗಿದೆ. 2011 ಏಪ್ರಿಲ್ 28ರಂದು ಸಂಜೆ 7.45 ರ ವೇಳೆಗೆ ಸುಳ್ಯದ ಅಂಬಟೆಡ್ಕ ಬಳಿಯ ಶ್ರೀ ಕೃಷ್ಣ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಮಕೃಷ್ಣ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಒಟ್ಟು ಏಳು ಆರೋಪಿಗಳಿದ್ದು ಸಾಕ್ಷ್ಯಾಧಾರಗಳ ಕೊರತೆಯಿಂದ ಅವರೆಲ್ಲರನ್ನು ಖುಲಾಸೆಗೊಳಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2016ರ ಅಕ್ಟೋಬರ್ 21ರಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಸರಕಾರ 2017ರಲ್ಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.