ಬೆಂಗಳೂರು: ಲಾರಿ ಚಾಲಕ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಆದಂ ಪಾಷಾ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ದೂರು ನೀಡಿದ್ದು, ಈ ಪ್ರಕರಣ ಈಗ ಬೇರೆಯೇ ತಿರುವು ಪಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ವ್ಯಾಲಂಕೇಣಿ ಬ್ರಿಡ್ಜ್ ಬಳಿ ವಾಟರ್ ಟ್ಯಾಂಕ್ ಲಾರಿ ಅತಿವೇಗವಾಗಿ ಬರುತ್ತಿದ್ದದ್ದನ್ನು ಪ್ರಶ್ನಿಸಿದಕ್ಕೆ ಚಾಲಕ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾಗಿ ಆದಂ ಪಾಷಾ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಗೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆದಂ ಪಾಷಾ ಮಾಡಿರುವ ಸುಳ್ಳಿನ ನಾಟಕ ಬಯಲಾಗಿದೆ.
ಸುಳ್ಳು ಪ್ರಕರಣ ದಾಖಲಿಸಿದ ಆದಂ ಪಾಷಾ ವಿರುದ್ಧ ಇದೀಗ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕೇಸು ದಾಖಲಿಸಿವ ವೇಳೆಯೂ ರಾಂಗ್ ನಂಬರ್ ಕೊಟ್ಟಿರುವುದಲ್ಲದೇ ತನ್ನ ಬಟ್ಟೆಗಳನ್ನ ತಾನೇ ಹರಿದುಕೊಂಡು ಬಂದು ದೂರು ಕೊಟ್ಟಿರುವುದು ಸಿಸಿಟಿವಿ ಪರಿಶೀಲನೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ,
ಸಿಸಿಟಿವಿಯಿಂದ ಸತ್ಯಾಸತ್ಯತೆ ತಿಳಿದ ಪೊಲೀಸರಿಗೆ, ಸುಳ್ಳು ದೂರು ಕೊಟ್ಟ ಹಿನ್ನಲೆ ಆದಂ ಪಾಷಾ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅದರಂತೆ ಮಾಜಿ ಬಿಗ್ಬಾಸ್ ಸ್ಪರ್ಧಿ ಆದಂ ಪಾಷಾಗೆ ಬಂಧನದ ಭೀತಿ ಶುರುವಾಗಿದೆ.
ರಿಯಾಲಿಟಿ ಸ್ಟಾರ್ ಆಡಮ್ ಪಾಶಾ ಅವರು ಬಿಗ್ ಬಾಸ್ ಕನ್ನಡ ಸೀಸನ್ 6 ರಲ್ಲಿ ಸ್ಪರ್ಧಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದಂದಿನಿಂದ ಹಲವು ವಿವಾದಗಳಲ್ಲಿ ಮುಳುಗಿದ್ದು, ಈ ಹಿಂದೆಯೂ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಇವರನ್ನು ಬಂಧಿಸಿತ್ತು.