ದುಬೈನಲ್ಲಿ ನಡೆದ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಯುಎಇ ಸರ್ಕಾರ ಗೋಲ್ಡನ್ ವೀಸಾ ನೀಡಿದೆ.
ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗೌರವಿಸಲು ಯುಎಇ ಸರ್ಕಾರ ಗೋಲ್ಡನ್ ವೀಸಾ ನೀಡುತ್ತದೆ. ಚಿತ್ರರಂಗದ ನಟ, ನಟಿಯರಷ್ಟೇ ಅಲ್ಲದೇ ಉದ್ಯಮಿಗಳು, ಹೂಡಿಕೆದಾರರು, ವಿಜ್ಞಾನಿಗಳಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವೀಸಾ ನೀಡಲಾಗುತ್ತದೆ. ಅದರಂತೆ ಈ ಬಾರಿ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನೀಡಲಾಗಿದೆ. ಈ ಗೋಲ್ಡನ್ ವೀಸಾ ಹೊಂದುವ ರಜನಿಕಾಂತ್ ಅವರು 10 ವರ್ಷ ಯುಎಇ ಪ್ರಜೆಯಾಗಿರುತ್ತಾರೆ.
ಈ ಸಂಬಂಧ ರಜನಿಕಾಂತ್ ಯುಎಇ ಸರ್ಕಾರಕ್ಕೆ ಹಾಗೂ ಲುಲು ಗ್ರೂಪ್‌ನ ಅಧ್ಯಕ್ಷ ಎಂ.ಎ ಯೂಸುಫ್ ಅಲಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ವೆಟ್ಟೈಯಾನ್ ಸಿನಿಮಾದಲ್ಲಿ ನಟಿಸುತ್ತಿರುವ ರಜನಿಕಾಂತ್ ದುಬೈ ಪ್ರವಾಸಕ್ಕೆಂದು ಹೋಗಿದ್ದರು. ಈ ಸಂದರ್ಭದಲ್ಲಿ ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ರಜನಿಕಾಂತ್ ಅವರಿಗೆ ಗೋಲ್ಡನ್ ವೀಸಾ ನೀಡಿ ಗೌರವಿಸಲಾಗಿದೆ ಎಂದು ಹೇಳಲಾಗಿದೆ.
ಈಗಾಗಲೇ ಯುಎಇಯಿಂದ ಅನೇಕ ಭಾರತೀಯ ನಟ, ನಟಿಯರು ವೀಸಾ ಪಡೆದುಕೊಂಡಿದ್ದಾರೆ. ಬೋನಿ ಕಪೂರ್, ಸಂಜಯ್ ದತ್, ವರುಣ್ ಧವನ್, ರಣವೀರ್ ಸಿಂಗ್, ವಿಜಯ್ ಸೇತುಪತಿ, ಕಮಲ್ ಹಾಸನ್, ನಟ ಮತ್ತು ನಿರ್ದೇಶಕ ಪಾರ್ಥಿಪನ್ ಅವರಿಗೆ ಯುಎಇ ಸರ್ಕಾರ ಈ ಮೊದಲು ಗೋಲ್ಡನ್ ವೀಸಾ ನೀಡಿತ್ತು. ನಟ ವಿಕ್ರಮ್ ಮತ್ತು ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರಿಗೂ ಗೋಲ್ಡನ್ ವೀಸಾ ನೀಡಲಾಗಿದೆ ಎಂದು ತಿಳಿದು ಬಂದಿದೆ.