ಚಿಕ್ಕಬಳ್ಳಾಪುರ: ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ ನೀಡಿದ್ದು, ದಯವಿಟ್ಟು ಇಂತಹ ವಿಷಯಗಳನ್ನ ನನ್ನ ಬಳಿ ಚರ್ಚೆ ಮಾಡಬೇಡಿ, ರಾಜ್ಯದ ಸಮಸ್ಯೆಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಮಾತ್ರ ಚರ್ಚೆ ಮಾಡಿ ಎಂದಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಹೆಚ್‌ಡಿಕೆ ಗರಂ ಆಗಿದ್ದಾರೆ. ಈ ರೀತಿಯ ಪ್ರಶ್ನೆಗಳನ್ನು ಕೇಳುವ ಅವಶ್ಯಕತೆ ಏನಿದೆ? ಕಾನೂನು ಇದೆ ಕಾನೂನಿನ ಅಡಿ ಎಲ್ಲವೂ ನಡೆಯಲಿದೆ. ಯಾಕೆ ಪ್ರಕರಣ ಬರ್ತಿದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನನ್ನ ಬಳಿ ಈ ರೀತಿಯ ಪ್ರಶ್ನೆಗಳನ್ನು ಕೇಳಬೇಡಿ ಎಂದು ತಿಳಿಸಿದರು.
ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿತ್ತು. ಬಳಿಕ ಸೂರಜ್ ಅವರ ಆಪ್ತ ಶಿವಕುಮಾರ್ ಅವರು, ಯುವಕ ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿ, ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಶಿವಕುಮಾರ್ ನೀಡಿದ ದೂರು ಆಧರಿಸಿ ಆರೋಪ ಮಾಡಿದ ಯುವಕನ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆರೋಪ ಮಾಡಿದ ಯುವಕ 5 ಕೋಟಿ ರೂ. ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಸುಳ್ಳು ದೂರು ನೀಡಿ ಬೆದರಿಕೆ ಹಾಕಿರುವ ಬಗ್ಗೆ ಶಿವಕುಮಾರ್ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 384, 506 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.