ಬೆಂಗಳೂರು: ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆ ತನ್ನ ಬೋರ್ಡ್‌ನಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (SUIT) ಉಪಕರಣದ ಮೂಲಕ 200-400 nm ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿದಿದೆ.
ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ಸೂರ್ಯನ ಡಿಸ್ಕ್‌ನ ಆರಂಭಿಕ ಸಂಪೂರ್ಣ ಚಿತ್ರಗಳನ್ನು ಸೆರೆಹಿಡಿಯುವ ಶ್ಲಾಘನೀಯ ಸಾಧನೆಯನ್ನು ಮಾಡಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ಮಾಹಿತಿಯನ್ನು ತನ್ನ X ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದೆ.
ಸೂರ್ಯನನ್ನು ನೇರಳಾತೀತ ವರ್ಣಪಟಲದೊಳಗೆ ವೀಕ್ಷಿಸಲು ವಿನ್ಯಾಸಗೊಳಿಸಲಾದ ಮಹತ್ವದ ಸಾಧನವಾಗಿರುವ SUIT ಪೇಲೋಡ್ ಅನ್ನು ಕಳೆದ ತಿಂಗಳು ನವೆಂಬರ್ 20 ರಂದು ಸಕ್ರಿಯಗೊಳಿಸಲಾಗಿದೆ. ಇದು ಸೂರ್ಯನ ಕ್ರೋಮೋಸ್ಪಿಯರ್ ಮತ್ತು ಪರಿವರ್ತನೆಯ ಪ್ರದೇಶದ ಪರೀಕ್ಷೆಯಲ್ಲಿ ಸಹಾಯ ಮಾಡುತ್ತದೆ ಎನ್ನಲಾಗಿದೆ.
ಸೂರ್ಯಶಿಕಾರಿಗೆ ಹೊರಟಿರುವ ಆದಿತ್ಯ-ಎಲ್1 ಮಿಷನ್ ಮೂಲಕ ಸೂರ್ಯನ ಮೊದಲ ಪೂರ್ಣ ಡಿಸ್ಕ್ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಇಸ್ರೋ ತಿಳಿಸಿದೆ. ಫೋಟೋಗಳು ಸಮೀಪದ ನೇರಳಾತೀತ ತರಂಗಾಂತರಗಳಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಸಂಕೀರ್ಣ ವಿವರಗಳಿಗೆ ಪ್ರವರ್ತಕ ಒಳನೋಟಗಳನ್ನು ಒದಗಿಸುತ್ತವೆ ಎಂದು ಇಸ್ರೋ ತಿಳಿಸಿದೆ.