ಬೆಂಗಳೂರು: ಕರ್ನಾಟಕದಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್(ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ ನೀಡಿದ್ದ ಡೆಡ್‌ಲೈನ್ ಜೂನ್ 12ಕ್ಕೆ ಅಂತ್ಯವಾಗಿದ್ದು, ಇದೀಗ ರಾಜ್ಯ ಸರ್ಕಾರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸೆಪ್ಟೆಂಬರ್ 15ರ ವರೆಗೆ ಗಡುವು ವಿಸ್ತರಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸೆಪ್ಟೆಂಬರ್15 ವರೆಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ನೀಡಲಾಗಿದೆ. ಸೆಪ್ಟೆಂಬರ್ 15ರ ಬಳಿಕ ಅವಧಿ ವಿಸ್ತರಿಸುವುದಿಲ್ಲ. ಈಗಾಗಲೇ ಹಲವು ಬಾರಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಗಡುವು ವಿಸ್ತರಿಸಿದ್ದೇವೆ. ಶೀಘ್ರದಲ್ಲೇ ಹೆಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆ ಆದೇಶ ಹೊರಡಿಸಲಾಗುತ್ತದೆ. ಮತ್ತೊಮ್ಮೆ ಗಡುವು ವಿಸ್ತರಿಸುವುದಿಲ್ಲ. ಸೆಪ್ಟೆಂಬರ್ 15ರೊಳಗೆ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ ವಾಹನ ಸವಾರರಿಗೆ ಅವರು ತಿಳಿಸಿದರು.
2019ರ ಏಪ್ರಿಲ್ ತಿಂಗಳಿಗಿಂತ ಮೊದಲು ನೋಂದಾಯಿಸಿದ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಜೂನ್ 12 ಕೊನೆ ದಿನವಾಗಿತ್ತು. ಜೂನ್ 12ಕ್ಕೆ ಡೆಡ್‌ಲೈನ್ ಅಂತ್ಯವಾದ ಬೆನ್ನಲ್ಲೇ ರಾಜ್ಯ ಹೈಕೋರ್ಟ್ ಹೆಚ್‌ಎಸ್‌ಆರ್‌ಪಿ ಅಳವಡಿಸದವರ ವಿರುದ್ಧ ಜುಲೈ 4ರ ವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಜೊತೆಗೆ ಹೆಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು ವಿಸ್ತರಣೆ ಮಾಡಲು ಒಪ್ಪಿಗೆ ನೀಡಿತ್ತು. ಇದೀಗ ರಾಜ್ಯ ಸರ್ಕಾರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಿಸಿದೆ. ಶೀಘ್ರದಲ್ಲೇ ಸರ್ಕಾರ ಈ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಲಿದೆ.