ಸೆ.18 ರಿಂದ 20 ರವರೆಗೆ ಗೌರಸಮುದ್ರ ಶ್ರೀ ಮಾರಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳು ಇದು.!

 

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿ ಗೌರಸಮುದ್ರ ಗ್ರಾಮದ ಶ್ರೀ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವು ಇದೇ ಸೆಪ್ಟೆಂಬರ್ 18 ರಿಂದ 20 ರವರೆಗೆ ನಡೆಯಲಿದೆ.

ಸೆಪ್ಟೆಂಬರ್ 17ರಂದು ಭಾನುವಾರ ಹುತ್ತಕ್ಕೆ ಅಭಿಷೇಕ, 18ರಂದು ಸೋಮವಾರ ಮೂಲ ಸನ್ನಿಧಿಗೆ ಅಭಿಷೇಕ, 19ರಂದು ಮಂಗಳವಾರ ಶ್ರೀ ಮಾರಮ್ಮ ದೇವಿಯು ತುಂಬಲಿಗೆ ಆಗಮಿಸಿ, ಗೌರಸಮುದ್ರಕ್ಕೆ ವಾಪಾಸ್ಸಾಗುವುದು, ನಂತರ ರಾತ್ರಿಯೆಲ್ಲಾ ಊರಿನಲ್ಲಿ ದೇವಿಯ ಮೆರವಣಿಗೆ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. 20ರಂದು ಬುಧವಾರ ಓಕಳಿ ನಂತರ ರಾತ್ರಿ 8 ಗಂಟೆಗೆ ಶ್ರೀ ಮಾರಮ್ಮದೇವಿಯ ಮೆರವಣಿಗೆ, 21ರಂದು ಗುರುವಾರ ಬೆಳಿಗ್ಗೆ 8.30 ರಿಂದ ಶ್ರಿ ಮಾರಮ್ಮ ದೇವಿಗೆ ಮಹಾಮಂಗಳಾರತಿ ನಂತರ ದೇವಿಯ ಗರ್ಭಗುಡಿ ಪ್ರವೇಶ ನಡೆಯಲಿದೆ.

Advertisement

ಭಕ್ತಾಧಿಗಳಿಗೆ ವಿಶೇಷ ಸೂಚನೆ: ಹರಕೆ ಮಾಡಿಕೊಂಡ ಭಕ್ತಾಧಿಗಳು ತುಂಬಲಿಗೆ ಹಾಗೂ ಗೌರಸಮುದ್ರದ ಮೂಲ ದೇವಸ್ಥಾನದಲ್ಲಿ ಎರಡೂ ಕಡೆ ಶ್ರೀ ದೇವಿಗೆ ಹಾಕುವ ಬೆಳ್ಳಿ ಬಂಗಾರದ ಒಡವೆ, ಸೀರೆ ಇತ್ಯಾದಿ ವಸ್ತ್ರಭರಣಗಳನ್ನು ವಿಶೇಷವಾಗಿ ವ್ಯವಸ್ಥೆ ಮಾಡಿರುವ  ಹುಂಡಿಯಲ್ಲಿಯೇ ಕಾಣಿಕೆಗಳನ್ನು ಹಾಕುವುದು. ಉಳ್ಳೇಗಡ್ಡೆಗಳನ್ನು (ಈರುಳ್ಳಿ) ದೇವಿಗೆ ಜೋರಾಗಿ ಎಸೆಯುವುದರಿಂದ ದೇವಿಯ ಒಡವೆಗಳು ಕೆಳಗೆ ಬೀಳುತ್ತವೆ. ಜನರಿಗೆ ಕಣ್ಣು ಮತ್ತು ಮುಖಕ್ಕೆ ಪೆಟ್ಟು ಬಿದ್ದು ತುಂಬಾ ತೊಂದರೆಯಾಗಿತ್ತದೆ. ಆದ್ದರಿಂದ ಭಕ್ತಾಧಿಗಳು ಈರುಳ್ಳಿಯನ್ನು ದೇವರ ಸನ್ನಿಧಿಗೆ ಮಾತ್ರ ಅರ್ಪಿಸುವುದು. ಗೌರಸಮುದ್ರ ಗ್ರಾಮ ಪಂಚಾಯಿತಿಯಿಂದ ನೀರಿನ ಸೌಕರ್ಯ, ಸ್ಥಳಗಳ ಸೌಕರ್ಯ ಹಾಗೂ ಇತರೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿರುವುದರಿಂದ ಅದನ್ನು ಸದುಪಯೋಗ ಪಡೆದುಕೊಳ್ಳಬೇಕು. ಹರಕೆ ಮಾಡಿಕೊಂಡ ಭಕ್ತಾಧಿಗಳು ದೇವಿಗೆ ಹಾಕುವ ಒಡವೆಗಳ ಬದಲಿಗೆ ನಗದು ಹಣವನ್ನು ಪೂಜಾರಿಗಳ ಕೈಗೆ ಕೊಡದೆ ತುಂಬಲಲ್ಲಿ ಮರದ ಕೆಳಗೆ ಇರುವ ಹಾಗೂ ಗೌರಸಮುದ್ರದ ಮೂಲ ದೇವಸ್ಥಾನದಲ್ಲಿ ಇಟ್ಟಿರುವ ಕಾಣಿಕೆ ಹುಂಡಿಯಲ್ಲಿ ಮಾತ್ರ ಹಾಕುವುದು. ಅಕ್ಕಿ ಬೇಳೆಯನ್ನು ಅರ್ಚಕರಿಗೆ ಕೊಡುವಾಗ ಅದರಲ್ಲಿ ಇರತಕ್ಕಂತಹ ಮುಡುಪು, ಕಣ್ಣು, ಕೋರೆ ಮೀಸೆಗಳನ್ನು ಕಾಣಿಕೆ ಹುಂಡಿಯಲ್ಲಿ ಮಾತ್ರ ಹಾಕುವುದು. ಭಕ್ತಾಧಿಗಳು ತಮ್ಮೊಂದಿಗೆ ಜಾತ್ರೆಗೆ ಕರೆತರುವ ಚಿಕ್ಕಮಕ್ಕಳ ಬಗ್ಗೆ ಅವರುಗಳು ತಪ್ಪಿಸಿಕೊಳ್ಳದಂತೆ ನಿಗಾ ವಹಿಸಬೇಕು.

ಪ್ರಾಣಿ ಬಲಿ ನಿಷೇಧ: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಿದೆ. ಅಂತೆಯೇ ಜಾತ್ರೆಯಲ್ಲಿ ಸ್ವಚತೆ ಹಾಗೂ ನೈರ್ಮಲ್ಯ ಕಾಪಾಡಬೇಕು. 2023ರ ಅಕ್ಟೋಬರ್ 17ರಂದು ಮಂಗಳವಾರ “ಮರಿ ಪರಿಷೆ” (ತಿಂಗಳ ಜಾತ್ರೆ) ನಡೆಯಲಿದೆ ಎಂದು ಚಳ್ಳಕೆರೆ ತಾಲ್ಲೂಕು ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement