ಚಿತ್ರದುರ್ಗ: ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ ಬಂದೋಬಸ್ತ್ ಕಾರ್ಯಕ್ಕೆ 14 ಡಿವೈಸ್‌ಪಿ, 33 ಸಿಪಿಐ, 112 ಪಿಎಸ್‌ಐ, 167 ಎಎಸ್‌ಐ, 1997 ಪೊಲೀಸ್ ಕಾನ್ಸ್ಟೇಬಲ್, 658 ಗೃಹ ರಕ್ಷಕರು ಸೇರಿ 3000 ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಇದರೊಂದಿಗೆ 15 ಕೆಎಸ್‌ಆರ್‌ಪಿ, 11 ಡಿಎಆರ್, 4 ಕ್ಯೂಆರ್‌ಟಿ ತುಕಡಿಗಳನ್ನು ನಿಯೋಜಿಸಲಾಗುವುದು. 81 ಕಡೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. 20 ವಿಡಿಯೋಗ್ರಾಫರ್‌ಗಳು ಮೆರವಣಿಗೆ ಚಿತ್ರೀಕರಣವನ್ನು ಮಾಡಲಿದ್ದಾರೆ. 9 ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗುವುದು. ಪಟಾಕಿ ಬಳಕೆಗೆ ಅವಕಾಶವಿಲ್ಲ. ಮೆರವಣಿಗೆಯಲ್ಲಿ ಡಿಜೆ ಬಳಸಲು ಪೊಲೀಸ್ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಹೊರ ಜಿಲ್ಲೆಗಳಿಂದ ಆಗಮಿಸುವ ಪೊಲೀಸ್ ಸಿಬ್ಬಂದಿಗೆ ತಂಗಲು ನಗರದ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ ಬಂಡಾರು ಸಭೆಯಲ್ಲಿ ತಿಳಿಸಿದರು.
ಸೆ.27 ಹಾಗೂ 28 ರಂದು ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಆದೇಶಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಕೋರಿಕೆ ಸಲ್ಲಿಸಲಾಗಿದೆ. ಶೋಭಾಯಾತ್ರೆಯ ದಿನ ಬಿ.ಡಿ.ರಸ್ತೆಯಲ್ಲಿ ವಾಹನಗಳ ಓಡಾಟ ನಿರ್ಬಂಧಿಸಿ, ಬದಲಿ ಮಾರ್ಗದಲ್ಲಿ ಬಸ್ ಹಾಗೂ ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ ಆದೇಶ ಹೊರಡಿಸಲು ಕೋರಿಕೆ ಸಲ್ಲಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ ಬಂಡಾರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಅಬಕಾರಿ ಉಪನಿರೀಕ್ಷಕ ಮಾದೇಶ್, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿಯ ಬದ್ರನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮಿತಿ ಪದಾಧಿಕಾರಿಗಳು ಇದ್ದರು.