ಕೇಪ್‌ಟೌನ್: ಈಸ್ಟರ್ ಹಬ್ಬಕ್ಕೆ ತೆರಳುತ್ತಿದ್ದ ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಗುರುವಾರ ದಕ್ಷಿಣ ಆಫ್ರಿಕಾದಲ್ಲಿ ಸೇತುವೆಯಿಂದ ಬಿದ್ದು ಬೆಂಕಿಗೆ ಆಹುತಿಯಾಗಿದ್ದು, ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಬದುಕುಳಿದ ಎಂಟು ವರ್ಷದ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದ ಮೊಕೊಪಾನೆ ಮತ್ತು ಮಾರ್ಕೆನ್ ನಡುವಿನ ಮಮತ್ಲಕಲಾ ಪರ್ವತದ ಹಾದಿಯಲ್ಲಿ ಅಪಘಾತ ಸಂಭವಿಸಿದೆ. ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮೃತರೆಲ್ಲರೂ ನೆರೆಯ ರಾಷ್ಟ್ರವಾದ ಬೋಟ್ಸ್ವಾನಾದ ರಾಜಧಾನಿ ಗ್ಯಾಬೊರೊನ್‌ನಿಂದ ಈಸ್ಟರ್ ಸಮ್ಮೇಳನಕ್ಕಾಗಿ ಚರ್ಚ್‌ಗೆ ಪ್ರಯಾಣಿಸುತ್ತಿದ್ದ ಯಾತ್ರಾರ್ಥಿಗಳು ಎಂದು ದಕ್ಷಿಣ ಆಫ್ರಿಕಾ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಎಸ್‌ಎಬಿಸಿ) ತಿಳಿಸಿದೆ.