ನವದೆಹಲಿ: ಸೇನಾ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ನಂತರ ಎಚ್‌ಐವಿ ಸೋಂಕಿಗೆ ತುತ್ತಾಗಿರುವ ಹಿರಿಯ ಸೇನಾಧಿಕಾರಿಗೆ ₹1.6 ಕೋಟಿ ಪರಿಹಾರ ಪಾವತಿಸಲು ಭಾರತೀಯ ವಾಯು ಸೇನೆಗೆ (ಐಎಎಫ್) ಮಂಗಳವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಐಎಎಫ್ ಮತ್ತು ಸೇನೆಯ ನಡತೆಯ ಬಗ್ಗೆ ಪ್ರಹಾರ ನಡೆಸಿರುವ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ದೀಂಪಕರ್ ದತ್ತಾ ಅವರ ನೇತೃತ್ವದ ವಿಭಾಗೀಯ ಪೀಠವು ಇಂತಹ ದೋಷಕ್ಕೆ ಐಎಎಫ್ ಮತ್ತು ಸೇನೆಯು ಇದಕ್ಕೆ ಜಂಟಿ ಭಾಗಿದಾರರು ಎಂದು ಹೇಳಿದೆ
ಹಿರಿಯ ಸೇನಾಧಿಕಾರಿಗಳ ಘನತೆ, ಗೌರವ ಮತ್ತು ಸಹಾನುಭೂತಿಯ ಬಗ್ಗೆ ಎಷ್ಟರ ಮಟ್ಟಿಗೆ ತಾತ್ಸಾರ ಇದೆ ಎಂಬುದನ್ನು ಹಾಲಿ ಪ್ರಕರಣದಲ್ಲಿ ಕಾಣಬಹುದಾಗಿದೆ ಎಂದು ಸುಪ್ರೀಂ ಹೇಳಿದೆ.
ಪ್ರತಿವಾದಿ ಉದ್ಯೋಗದಾತರ ವರ್ತನೆಯಲ್ಲಿ, ಮೇಲ್ಮನವಿದಾರರ ಬಗೆಗಿನ ತಿರಸ್ಕಾರ ಮತ್ತು ತಾರತಮ್ಯ ಕಾಣಬಹುದಾಗಿದೆ. ಪ್ರಕರಣದಲ್ಲಿ ಈ ನ್ಯಾಯಾಲಯವು ಒಂದು ಹಂತದ ವಾಸ್ತವಿಕ ಪರಿಹಾರವನ್ನು ಕಲ್ಪಿಸಿದ್ದರೂ ಯಾವುದೇ ರೂಪದ ಹಣಕಾಸಿನ ಪರಿಹಾರವು ಅರ್ಜಿದಾರರ ಘನತೆಯ ಬುನಾದಿಯನ್ನೇ ಅಲುಗಾಡಿಸಿ, ಅವರ ಮರ್ಯಾದೆಯನ್ನು ದೋಚುವ ಮೂಲಕ ಅವರಿಗೆ ಉಂಟುಮಾಡಿರುವ ಧಕ್ಕೆಯನ್ನು ಭರಿಸಲಾಗದು ಎಂದು ಹೇಳಿದೆ.