ನವದೆಹಲಿ : ಕೋವಿಶೀಲ್ಡ್ ಲಸಿಕೆ ಅಪರೂಪದ ಮತ್ತು ಅಪಾಯಕಾರಿ ಅಡ್ಡ ಪರಿಣಾಮ ಉಂಟುಮಾಡಬಹುದು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖವಾದ ನಂತರ ಆಸ್ಟ್ರಾಜೆನಕಾ ಸಂಸ್ಥೆ ಲಸಿಕೆಯನ್ನು ಮಾರುಕಟ್ಟೆಯಿಂದ ವಿಶ್ವದಾದ್ಯಂತ ಹಿಂತೆಗೆದುಕೊಂಡಿದೆ. ಸಾಂಕ್ರಾಮಿಕತೆ ಆರಂಭ ಆದಾಗಿನಿಂದ ಅಪ್ಡೇಟ್ ಮಾಡಲಾದ ಲಸಿಕೆ ಅಧಿಕ ಪ್ರಮಾಣದಲ್ಲಿ ಲಭ್ಯ ಇರುವುದರಿಂದ ಕೋವಿಶೀಲ್ಡ್ ವಾಪಸ್ ಪಡೆಯುತ್ತಿರುವುದಾಗಿ ಆಸ್ಟ್ರಾಜೆನೆಕಾ ಹೇಳಿಕೊಂಡಿದೆ.
ಕೋವಿಶೀಲ್ಡ್ ಅಡ್ಡ ಪರಿಣಾಮದ ಬಗ್ಗೆ ಅದರ ತಯಾರಿಕಾ ಕಂಪನಿಯೇ ಒಪ್ಪಿಕೊಂಡಿದ್ದು ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದು, ಭಾರತ ಸಹಿತ ಹಲವು ದೇಶಗಳಲ್ಲಿ ಆಸ್ಟ್ರಾಜೆನೆಕಾ ವಿರುದ್ಧ ಕಾನೂನು ಸಮರಕ್ಕೂ ಮುಂದಾಗಿದ್ದಾರೆ. ಆಸ್ಟ್ರಾಜೆನೆಕಾದ ಲಸಿಕೆಯನ್ನು ಭಾರತದಲ್ಲಿ ಭಾರತ ಸೀರಂ ಸಂಸ್ಥೆ (ಸೀರಂ) ಪಾಲುದಾರಿಕೆಯಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಪೂರೈಸಲಾಗಿತ್ತು.
ಈ ಕೋವಿಡ್-19 ಲಸಿಕೆಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿತ್ತು. ಅದನ್ನು ಯುರೋಪ್ನಲ್ಲಿ ವ್ಯಾಕ್ಸ್ಜೆವ್ರಿಯಾ ಎಂಬ ಹೆಸರಿನಲ್ಲಿ ಜನರಿಗೆ ನೀಡಲಾಗಿತ್ತು. 27 ದೇಶಗಳ ಐರೋಪ್ಯ ಒಕ್ಕೂಟದಲ್ಲಿ (ಇಯು) ವ್ಯಾಕ್ಸ್ಜೆವ್ರಿಯಾ ಇನ್ನು ಮುಂದೆ ಬಳಕೆಯಾಗದು ಎಂದು ಒಕ್ಕೂಟದ ಔಷಧ ನಿಯಂತ್ರಣ ಸಂಸ್ಥೆ ಯುರೋಪಿಯನ್ ಮೆಡಿಸಿನ್ ಏಜೆನ್ಸಿ ಮಂಗಳವಾರ ತಿಳಿಸಿದೆ. ಆಸ್ಟ್ರಾಜೆನೆಕಾ ಮಾರ್ಚ್ನಲ್ಲೇ ಸ್ವಪ್ರೇರಿತವಾಗಿ ಲಸಿಕೆಯನ್ನು ವಾಪಸ್ ಪಡೆದಿರುವುದರಿಂದ ಅದರ ಬಳಕೆಯನ್ನು ನಿಲ್ಲಿಸಲಾಗುತ್ತದೆ ಎಂದಿದೆ. ಅಡ್ಡ ಪರಿಣಾಮವನ್ನು ಸ್ವತಃ ಒಪ್ಪಿಕೊಂಡಿದ್ದರೂ ಜಾಗತಿಕ ಸಾಂಕ್ರಾಮಿಕತೆ ಕೊನೆಗೊಳಿಸುವಲ್ಲಿ ವ್ಯಾಕ್ಸ್ಜೆವ್ರಿಯಾ ವಹಿಸಿದ ಗಣನೀಯ ಪಾತ್ರದ ಬಗ್ಗೆ ತನಗೆ ಅಪಾರ ಹೆಮ್ಮೆ ಇದೆ ಆಸ್ಟ್ರಾಜೆನೆಕಾ ಕಂಪನಿ ಹೇಳಿಕೊಂಡಿದೆ.
ಆಸ್ಟ್ರಾಜೆನೆಕಾದ ಲಸಿಕೆ ಬಳಕೆಯ ಮೊದಲ ವರ್ಷದಲ್ಲೇ ಜಗತ್ತಿನಾದ್ಯಂತ 65 ಲಕ್ಷಕ್ಕೂ ಅಧಿಕ ಜನರ ಪ್ರಾಣ ರಕ್ಷಣೆಯಾಗಿದೆ. 300 ಕೋಟಿಗೂ ಹೆಚ್ಚು ಡೋಸ್ ಸರಬರಾಜು ಮಾಡಲಾಗಿತ್ತು ಎಂದು ಸ್ವತಂತ್ರ ಅಂದಾಜುಗಳೇ ಹೇಳಿವೆ ಎಂದು ಆಸ್ಟ್ರಾಜೆನೆಕಾ ತಿಳಿಸಿದೆ. ವಿಶ್ವದೆಲ್ಲೆಡೆಯ ಸರ್ಕಾರಗಳು ನಮ್ಮ ಪ್ರಯತ್ನಗಳನ್ನು ಗುರುತಿಸಿವೆ. ಜಾಗತಿಕ ಸಾಂಕ್ರಾಮಿಕತೆಯನ್ನು ಕೊನೆಗೊಳಿ ಸುವಲ್ಲಿ ನಮ್ಮ ಲಸಿಕೆ ಮಹತ್ವದ ಅಂಶವಾಗಿತ್ತೆಂದು ಮಾನ್ಯ ಮಾಡಿವೆ ಎಂದು ಕಂಪನಿ ಹೇಳಿಕೊಂಡಿದೆ. ಭಾರತದಲ್ಲಿ ಒಟ್ಟು 220 ಕೋಟಿ ಡೋಸೇಜ್ ಕೋವಿಡ್-19 ಲಸಿಕೆ ನೀಡಲಾಗಿದ್ದು ಆ ಪೈಕಿ ಬಹುತೇಕ ಕೋವಿಶೀಲ್ಡ್ ವ್ಯಾಕ್ಸಿನ್ ಆಗಿವೆ. ಸದ್ಯ ವ್ಯಾಕ್ಸ್ಜೆವ್ರಿಯಾ ಬೇಡಿಕೆ ಕುಸಿದಿದೆ. ಅದನ್ನು ಈಗ ಉತ್ಪಾದಿಸಲಾಗುತ್ತಿಲ್ಲ ಅಥವಾ ಸರಬರಾಜು ಮಾಡುತ್ತಿಲ್ಲ ಎಂದು ಆಸ್ಟ್ರಾಜೆನೆಕಾ ಹೇಳಿದೆ.