ಕೊಲೊಂಬೊ: ಸೈಬರ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಕನಿಷ್ಠ 60 ಮಂದಿ ಭಾರತೀಯರನ್ನು ಶ್ರೀಲಂಕಾದ ಅಪರಾಧ ತನಿಖಾ (ಸಿಐಡಿ) ಇಲಾಖೆ ಅಧಿಕಾರಿಗಳು ಬಂಧಿಸಿರುತ್ತಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ ವಕ್ತಾರ ಎಸ್‌ಎಸ್‌ಪಿ ನಿಹಾಲ್ ತಲ್ಲುವಾ ಅವರು, ಕೊಲೊಂಬೊ ಉಪನಗರಗಳಾದ ಮಡಿವೇಲಾ, ಬತ್ತರಮುಲ್ಲಾ ಹಾಗೂ ಪಶ್ಚಿಮ ಕರಾವಳಿ ಪಟ್ಟಣ ನೆಗೊಂಬೊದಲ್ಲಿ ಸಿಐಡಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಸುಮಾರು 60 ಮಂದಿ ಆರೋಪಿಗಳನ್ನು ಬಂಧಿಸಿದೆ. ದಾಳಿ ವೇಳೆ 135 ಮೊಬೈಲ್‌ಗಳು ಹಾಗೂ 57 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಸಂವಾದ ಮಾಡಿ ಹಣ ಸಂಪಾದನೆ ಮಾಡಬಹುದೆಂದು ವಾಟ್ಸ್ಆ್ಯಪ್ ಮೂಲಕ ಆರೋಪಿಗಳು ಆಮಿಷವೊಡಿದ್ದಾರೆ. ಈ ಆಮಿಷಕ್ಕೆ ತುತ್ತಾಗಿ ವ್ಯಕ್ತಿಯೊಬ್ಬರು ವಚನೆಗೊಳಗಾಗಿ ದೂರು ದಾಖಲಿಸಿದ್ದಾರೆ. ಸಂತ್ರಸ್ತರೊಬ್ಬರು ನೀಡಿದ್ದ ದೂರಿನ ಮೇರೆಗೆ ತನಿಖೆ ಕೈಗೊಂಡು, ಅದರ ಬೆನ್ನಲ್ಲೇ ಸಿಐಡಿ ಈ ದಾಳಿ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳು ದುಬೈ ಹಾಗೂ ಅಫ್ಘಾನಿಸ್ತಾನ ಸಂಪರ್ಕ ಹೊಂದಿದ್ದಾರೆ. ಇವರೆಲ್ಲ ಹಣಕಾಸು ವಂಚನೆ, ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಹಾಗೂ ವಿದೇಶಿ ಪ್ರಜೆಗಳು ಸಹ ಇವರಿಂದ ವಂಚನೆಗೊಳಗಾಗಿರುವ ಸಾಧ್ಯತೆ ಇದೆ. ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.