ಮಡಿಕೇರಿ: ಸೈಬರ್ ವಂಚಕರಿಗೆ ಸಿಮ್ ಪೂರೈಸುತ್ತಿದ್ದ ದೆಹಲಿ ಮೂಲದ ವ್ಯಕ್ತಿಯನ್ನು ಕೇರಳದ ಮಲಪ್ಪುರಂ ಪೊಲೀಸರು ಬಂಧಿಸಿದ್ದು, ಆತನಿಂದ 40 ಸಾವಿರ ಸಿಮ್ ಕಾರ್ಡ್ ಮತ್ತು 180 ಮೊಬೈಲ್ ಗಳನ್ನು ವಶಕ್ಕೆ ಪಡೆದ ಘಟನೆ ಕೊಡಗಿನ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ ಅಬ್ದುಲ್ ರೋಷನ್ (46) ಬಂಧಿತ ವ್ಯಕ್ತಿ.
ಮಲಪ್ಪುರಂ ಜಿಲ್ಲೆಯ ವ್ಯಕ್ತಿಯೊಬ್ಬರು 1.8 ಕೋಟಿ ವಂಚನೆಯಾದ ಬಗ್ಗೆ ದೂರು ದಾಖಲಿಸಿದ್ದರು. ಫೇಸ್ ಬುಕ್ ನಲ್ಲಿ ಸ್ಟಾಕ್ ಮಾರ್ಕೆಟ್ ಹೂಡಿಕೆ ಬಗ್ಗೆ ತಿಳಿದು ಅದರಲ್ಲಿದ್ದ ಲಿಂಕ್ ಮೇಲೆ ಒತ್ತಿದ ಆ ವ್ಯಕ್ತಿ, ವಂಚಕರು ಹೇಳಿದಂತೆ ಸ್ಟಾಕ್ ಮಾರ್ಕೆಟ್ ಆಪ್ ಡೌನ್ ಲೋಡ್ ಮಾಡಿದ್ದು, 1.8 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಬಳಿಕ ಆ ಹಣವನ್ನು ಅವರು ಆಪ್ ನಿಂದ ಹಿಂಪಡೆಯಲಾಗದೆ ವಂಚನೆಗೊಳಗಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಸ್ಟೈಲ್ ಎಂಬ ಸ್ಟಾಕ್ ಮಾರ್ಕೆಟ್ ವೆಬ್ ಸೈಟ್ ಇದಾಗಿದ್ದು, ಇದರಲ್ಲಿ ಗ್ಯಾಂಗ್ ಒಂದು ಸಕ್ರಿಯವಾಗಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಬಳಿಕ ವಂಚಕರು ಉಪಯೋಗಿಸುತ್ತಿದ್ದ ಸಿಮ್ ಕಾರ್ಡ್ ಬೆನ್ನತ್ತಿ ಮಲಪ್ಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಅಬ್ದುಲ್ ರೋಷನ್ ನನ್ನು ಬಂಧಿಸಿದ್ದಾರೆ. ಈತ ಬೇರೆ ಬೇರೆ ಟೆಲಿಫೋನ್ ಕಂಪನಿಗಳ ಹೆಸರಲ್ಲಿ ನಕಲಿ ಸಿಮ್ ಕಾರ್ಡ್ ಗಳನ್ನು ಮಾಡಿಸಿ ಸೈಬರ್ ವಂಚಕರಿಗೆ ಪೂರೈಸುತ್ತಿದ್ದ ಎನ್ನಲಾಗಿದೆ. ಆತನ ಬಳಿ ಇದ್ದ ಸಾವಿರಾರು ಸಿಮ್ ಕಾರ್ಡ್ ಗಳು, ನೂರಾರು ಮೊಬೈಲ್ ಫೋನ್ ಗಳು ಹಾಗೂ ಆರು ಬಯೋಮೆಟ್ರಿಕ್ ಸ್ಕ್ಯಾನರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.