ಚೆನ್ನೈ, : ತನ್ನ ಬಾಲ್ಯದ ಸಹಪಾಠಿ ನಂದಿನಿ ಎಂಬ ಯುವತಿಯನ್ನು ಕಣ್ಣಿಗೆ ಬಟ್ಟೆ ಕಟ್ಟಿ, ಸರಪಳಿಯಿಂದ ಬಂಧಿಸಿ ಸಜೀವ ದಹನಗೊಳಿಸಿದ ತೃತೀಯಲಿಂಗಿ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಕೃತ್ಯ ನಡೆಸಿರುವ ಆರೋಪಿಯನ್ನು ಪಾಂಡಿ ಮಹೇಶ್ವರಿ ಎಂದು ಗುರುತಿಸಲಾಗಿದೆ. ಆರೋಪಿ ಮಹೇಶ್ವರಿ ತನ್ನ ಹೆಸರನ್ನು ವೆಟ್ರಿಮಾರನ್ ಎಂದು ಬದಲಾಯಿಸಿಕೊಂಡು ನಂದಿನಿ ಹುಟ್ಟುಹಬ್ಬದ ನೆಪದಲ್ಲಿ ಬಂದು ಅವಳ ಕಣ್ಣಿಗೆ ಬಟ್ಟೆ ಕಟ್ಟಿ, ಆಕೆಯನ್ನು ಸರಪಳಿಯಿಂದ ಬಂಧಿಸಿ ಸುಟ್ಟು ಹಾಕಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಘಟನೆಯು ಚೆನ್ನೈನ ದಕ್ಷಿಣ ಉಪನಗರದ ಕೆಳಂಬಕ್ಕಂ ಬಳಿಯ ತಲಂಬೂರ್‌ನಲ್ಲಿ ಶನಿವಾರ ನಡೆದಿದೆ.
ಮೃತಪಟ್ಟ ನಂದಿನಿ (25) ಮಧುರೈನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ತನ್ನ ಸಹಪಾಠಿಯಾಗಿದ್ದ ವೆಟ್ರಿಮಾರನ್ ಯಾವ ಉದ್ದೇಶ ಇತ್ತು ಎಂಬುದು ಆಕೆಗೆ ತಿಳಿದಿರಲಿಲ್ಲ. ಆರೋಪಿಯು ಆಕೆಯ ಹುಟ್ಟುಹಬ್ಬಕ್ಕೆ ಏನದರೂ ಸರ್ಪ್ರೈಸ್ ನೀಡಬೇಕೆಂದು ಯೋಚಿಸಿ ಭೇಟಿಯಾಗಲು ಬಂದಿದ್ದ ಸಮಯದಲ್ಲಿ ಈ ಕೃತ್ಯ ನಡೆಸಲಾಗಿದೆ ಎಂದು ಹೇಳಲಾಗಿದೆ.
26 ವರ್ಷದ ಪಾಂಡಿ ಮಹೇಶ್ವರಿ ಮಧುರೈನ ಶಾಲೆಯೊಂದರಲ್ಲಿ ನಂದಿನಿಯೊಂದಿಗೆ ಓದುತ್ತಿದ್ದಳು. ಮಹೇಶ್ವರಿ ತನ್ನ ಹೆಸರನ್ನು ವೆಟ್ರಿಮಾರನ್ ಎಂದು ಬದಲಾಯಿಸಿಕೊಂಡ ನಂತರವೂ ನಂದಿನಿ ಮಾನವೀಯ ದೃಷ್ಟಿಯಲ್ಲಿ ತನ್ನ ಸ್ನೇಹವನ್ನು ಮಹೇಶ್ವರಿ ಜೊತೆ ಮುಂದುವರೆಸಿದ್ದಳು. ಅಷ್ಟೇ ಅಲ್ಲದೇ ಇವರಿಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.