ನವದೆಹಲಿ : ಪ್ರಧಾನಿ ಮೋದಿ ಕರೆಕೊಟ್ಟಿರುವ ‘ಸ್ವಚ್ಛತಾ ಹಿ ಸೇವಾ’ ಅಭಿಯಾನಕ್ಕೆ ದೇಶದೆಲ್ಲೆಡೆ ಅಭೂತಪೂರ್ವ ಸ್ಪಂದನೆ ದೊರೆತಿದೆ. ಜನ ಸಾಮಾನ್ಯರಿಂದ ಹಿಡಿದು ರಾಜಕೀಯ ಗಣ್ಯರವರೆಗೆ ಎಲ್ಲರೂ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡರು. ಮಹಾತ್ಮ ಗಾಂಧಿಜೀಯವರಿಗೆ ಗೌರವ ಸೂಚಿಸುವ ಸಲುವಾಗಿ ಇಂದು ದೇಶಾದ್ಯಂತ ಜನ ಒಂದು ಗಂಟೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮೋದಿ ತಮ್ಮ 105ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಮನವಿ ಮಾಡಿದ್ದರು. ಅದರಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಶ್ರಮದಾನ ಕಾರ್ಯದಲ್ಲಿ ಭಾಗಿಯಾಗಿ ಅಭಿಯಾನವನ್ನು ಯಶಸ್ವಿಗೊಳಿಸಿದರು. ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭಾಗವಹಿಸಿದರು. ರೈಲ್ವೇ ಹಳಿ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್, ಇನ್ನಿತರ ವಸ್ತುಗಳನ್ನು ಆಯ್ದು ಕಸದ ಬುಟ್ಟಿಗೆ ಹಾಕಿದರು. ಸ್ವತಃ ಪ್ರಧಾನಿ ಮೋದಿ ಕೂಡಾ ದೇಶದ ನಂಬರ್ ಒನ್ ಬಾಡಿ ಬಿಲ್ಡರ್ ಅಂಕಿತ್ ಬೈಯನಪುರಿ ಜೊತೆ ಸೇರಿ ನವದೆಹಲಿಯ ಪ್ರಧಾನಿ ಕಚೇರಿ ಬಳಿಯ ಉದ್ಯಾನವನದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು. ಅಂಕಿತ್ ಬೈಯನಪುರಿ ಜೊತೆಗೆ ಚರ್ಚೆ ನಡೆಸುತ್ತಾ ಅಕ್ಕಪಕ್ಕದ ಕಸವನ್ನು ಗೂಡಿಸಿ ಕಸದ ಬುಟ್ಟಿಗೆ ಹಾಕಿದರು. ಇಂದು, ರಾಷ್ಟ್ರವು ಸ್ವಚ್ಛತೆಯತ್ತ ಗಮನಹರಿಸುತ್ತಿರುವಾಗ, ಅಂಕಿತ್ ಬೈಯನಪುರಿಯ ಮತ್ತು ನಾನು ಅದೇ ರೀತಿ ಮಾಡಿದೇವು. ಕೇವಲ ಶುಚಿತ್ವದ ಹೊರತಾಗಿ, ನಾವು ಫಿಟ್‌ನೆಸ್ ಮತ್ತು ಯೋಗಕ್ಷೇಮವನ್ನು ಮಿಶ್ರಣಕ್ಕೆ ಬೆರೆಸಿದ್ದೇವೆ. ಇದು ‘ಸ್ವಚ್ಛ ಮತ್ತು ಸ್ವಸ್ಥ ಭಾರತ್’ ಎಂದು ಈ ವೇಳೆ ಪ್ರಧಾನಿ ಮೋದಿ ಹೇಳಿದರು.