ನವದೆಹಲಿ :ಸ್ವಚ್ಛತೆ ಕೂಡ ನಿತ್ಯದ ಕಾಯಕವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ವಚ್ಛಭಾರತ ಅಭಿಯಾನ 10 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ನಾವು ನಿತ್ಯ ನಮ್ಮ ಪರಿಸರವನ್ನು ಒಂದಲ್ಲಾ ಒಂದು ರೀತಿಯಿಂದ ಹಾಳು ಮಾಡುತ್ತೇವೆ, ಆದರೆ ಪರಿಸರವನ್ನು ನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಪಣ ತೊಡಬೇಕು ಎಂದರು.
ಭಾರತ ಸರ್ಕಾರವು ದೇಶದ ಮೂಲೆ ಮೂಲೆಗೆ ಹೋಗಿ ಸ್ವಚ್ಛತೆಯ ಪಾಠ ಮಾಡಿ ಅಥವಾ ಸ್ಪರ್ಧೆ ನಡೆಸಲು ಸಾಧ್ಯವಿಲ್ಲ, ಅಲ್ಲಿಯ ಸ್ಥಳೀಯರು ಆಸ್ಪತ್ರೆಗಳು, ಶಾಲೆಗಳು, ಕಚೇರಿಗಳು, ಬಾವಿ, ನದಿಗಳನ್ನು ಶುಚಿಗೊಳಿಸುವುದು ಸೇರಿದಂತೆ ಸ್ವಚ್ಛತೆಗೆ ಸಂಬಂಧಿಸಿದಂತೆ ಸ್ಪರ್ಧೆ ಏರ್ಪಡಿಸಬೇಕು. ಆಗ ಪ್ರತಿಯೊಂದು ಬೀದಿ, ಪ್ರತಿಯೊಂದು ಹಳ್ಳಿಯೂ ಶುದ್ಧವಾಗಿರಲು ಸಾಧ್ಯ ಎಂದರು.
ಸ್ವಚ್ಛ ಭಾರತವು ಪ್ರಪಂಚದ ಅತ್ಯಂತ ದೊಡ್ಡ ಮತ್ತು ಜನರ ಅತ್ಯಂತ ಯಶಸ್ವಿ ಸಂಕಲ್ಪವಾಗಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಜನರು ವಹಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನವು ಕೇವಲ ಸ್ವಚ್ಛತಾ ಆಂದೋಲನವಲ್ಲ. ಇದು ಈಗ ಸಮೃದ್ಧಿಯ ಹೊಸ ಹಾದಿಯಾಗುತ್ತಿದೆ ಎಂದರು.