ನವದೆಹಲಿ : ದೇಶದಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಅಂತೆಯೇ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸತತ 11ನೇ ಬಾರಿಗೆ ಧ್ವಜಾರೋಹಣ ಮಾಡಿದ್ದಾರೆ. ಕಳೆದ ಬಾರಿ ಸತತ 10ನೇ ಬಾರಿಗೆ ಧ್ವಜಾರೋಹಣ ಮಾಡುವ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದಾಖಲೆಯನ್ನ ಮೋದಿ ಸರಿಗಟ್ಟಿದ್ದರು. ಈ ಬಾರಿ ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಸತತ 11 ಸ್ವಾತಂತ್ರ್ಯ ದಿನದ ಭಾಷಣ ಮಾಡಿ ಮತ್ತೊಂದು ಹಿಸ್ಟರಿ ಕ್ರಿಯೇಟ್ ಮಾಡಿದ್ದಾರೆ. ಧ್ವಜಾರೋಹಣ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.. ಇಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ‘ಸ್ವಾತಂತ್ರ್ಯ ಪ್ರೇಮಿಗಳಿಗೆ’ ಗೌರವ ಸಲ್ಲಿಸುವ ದಿನ. ಈ ದೇಶ ಅವರಿಗೆ ಋಣಿಯಾಗಿದೆ. ನಮ್ಮ ಪೂರ್ವಜರ ರಕ್ತ ನಮ್ಮ ದೇಹದಲ್ಲಿದೆ. ಇಂದು ನಾವು 140 ಕೋಟಿ ಪ್ರಜೆಗಳಾಗಿದ್ದೇವೆ. ದೃಢಸಂಕಲ್ಪದಿಂದ ಮುನ್ನಡೆದರೆ ಪ್ರತಿಯೊಂದು ಸವಾಲುಗಳನ್ನು ಮೆಟ್ಟಿ ನಿಂತು ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಬಹುದು ಎಂದರು. ಪ್ರೀತಿಯ ದೇಶವಾಸಿಗಳೇ, ಈ ವರ್ಷ ಮತ್ತು ಕಳೆದ ವರ್ಷ ದೇಶದಲ್ಲಿ ಅನೇಕ ನೈಸರ್ಗಿಕ ವಿಕೋಪಗಳು ಸಂಭವಿಸಿವೆ. ಇದರಿಂದ ಹಲವು ಮಂದಿ ತಮ್ಮ ಕುಟುಂಬಗಳನ್ನು ಕಳೆದುಕೊಂಡಿದ್ದಾರೆ. ಆಸ್ತಿ-ಪಾಸ್ತಿ ನಷ್ಟವಾಗಿದೆ. ರಾಷ್ಟ್ರೀಯ ಖಜಾನೆಗೆ ನಷ್ಟ ಉಂಟಾಗಿದೆ. ಕುಟುಂಬ ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಈ ಬಿಕ್ಕಟ್ಟಿನ ಸಮಯದಲ್ಲಿ ದೇಶವು ಅವರೊಂದಿಗೆ ನಿಂತಿದೆ ಎಂದರು.
.ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ