ಹೊಸಪೇಟೆ: ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ.
ಇನ್ನು ಮುಂದೆ ದೇವಸ್ಥಾನಕ್ಕೆ ಭೇಟಿ ನೀಡುವವರು ಬರ್ಮುಡ, ಜೀನ್ಸ್ ಚಡ್ಡಿ ಧರಿಸುವಂತಿಲ್ಲ. ಇದರ ಬದಲಾಗಿ ಇನ್ನು ಮುಂದೆ ಪಂಚೆ ತೊಡುವುದು ಕಡ್ಡಾಯವಾಗಿದೆ.
ಪ್ರವಾಸಿ ತಾಣವೂ ಆದ ಹಂಪಿಗೆ ಪ್ರತಿನಿತ್ಯವೂ ಸಾವಿರಾರು ಮಂದಿ ವಿದೇಶಗರೂ ಭೇಟಿ ನೀಡುತ್ತಾರೆ. ಅವರು ದೇವಸ್ಥಾನಕ್ಕೆ ತುಂಡು ಉಡುಗೆಯಲ್ಲಿ ಭೇಟಿ ನೀಡುತ್ತಿದ್ದು, ಇದರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ದೂರಲಾಗುತ್ತಿತ್ತು. ಆದ್ದರಿಂದ ಇದೀಗ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ.
ಇನ್ನು ದೇವಸ್ಥಾನಕ್ಕೆ ಭೇಟಿ ನೀಡುವ ಪುರುಷರಷ್ಟೇ ಅಲ್ಲದೇ, ತುಂಡು ಉಡುಗೆಯಲ್ಲಿ ಬರುವ ಮಹಿಳೆಯರು ಸಹ ದೇವಸ್ಥಾನದ ಭೇಟಿ ವೇಳೆ ಶಲ್ಯ ತೊಡಬೇಕಾಗಿದೆ. ಪ್ರಸ್ತುತ ದೇವಸ್ಥಾನದ ವತಿಯಿಂದ ತುಂಡು ಉಡುಗೆಯಲ್ಲಿ ಬರುವವರಿಗೆ ವಸ್ತ್ರ ನೀಡಲಾಗುತ್ತಿದ್ದು, ಇದಕ್ಕೆ ಯಾವುದೇ ರೀತಿಯ ಶುಲ್ಕವನ್ನು ಪಡೆಯುತ್ತಿಲ್ಲ. ದೇವರ ದರ್ಶನ ಮಾಡಿದ ಬಳಿಕ ನೀಡಿದ ವಸ್ತ್ರವನ್ನು ಮರಳಿ ಪಡೆಯುವಂತಹ ವ್ಯವಸ್ಥೆ ಮಾಡಲಾಗಿದೆ.