ಗ್ವಾಲಿಯರ್: ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರಕಾರ ಮಾಡಿದ ಹಗರಣಗಳ ಬಗ್ಗೆ ಮಾತನಾಡುವಾಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ದಾಖಲೆಗಾಗಿ ತಡಕಾಡಿದ್ದಾರೆ. ಗ್ವಾಲಿಯರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುವ ವೇಳೆ ಈ ಅಚಾತುರ್ಯ ನಡೆದಿದೆ. ಸಮಾವೇಶದಲ್ಲಿ ಮಾತನಾಡಿದದ ಪ್ರಿಯಾಂಕಾ ಗಾಂಧಿ ವಾದ್ರಾ, ಆಡಳಿತಾರೂಢ ಬಿಜೆಪಿ ವಿರುದ್ಧ ಗುಡುಗಿದ್ದು, ಅದು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು. ಈ ವೇಳೆ ಶಿವರಾಜ್ ಸರ್ಕಾರದ ಹಗರಣಗಳನ್ನು ಪಟ್ಟಿ ಮಾಡಲು ಯತ್ನಿಸಿದಾಗ, ಪ್ರಿಯಾಂಕಾ ವೇದಿಕೆಯಲ್ಲಿ ಹಗರಣಗಳ ಪಟ್ಟಿಯನ್ನು ಹುಡುಕಲು ತಡಕಾಡಿದರು. ಕೊನೆಗೆ ಅಂತಿಮವಾಗಿ ಆ ಅಂಶ ಬಿಟ್ಟು ‘ಅದರ ಬಗ್ಗೆ ನಂತರ ಹೇಳುತ್ತೇನೆ’ ಎಂದು ಪ್ರೇಕ್ಷಕರಿಗೆ ಹೇಳಿದರು. ಈ ಘಟನೆಯ ವಿಡಿಯೋವನ್ನು ಇದೀಗ ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಈ ವೀಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, “ಇಲ್ಲಿ ನಿರಂತರವಾಗಿ ವಂಚನೆಗಳು ನಡೆಯುತ್ತಿವೆ. ಅದರ ದೊಡ್ಡ ಪಟ್ಟಿ ನನ್ನ ಬಳಿ ಇದೆ. ನಾನು ಅದನ್ನು ಹೊರತೆಗೆಯುತ್ತೇನೆ. ಪಟ್ಟಿಯು ತುಂಬಾ ಉದ್ದವಾಗಿದೆ. ಅವರೆಲ್ಲರನ್ನೂ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳುತ್ತಿರುವುದು ಕಂಡುಬಂದಿದೆ.