ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ದ ನಡೆಯುತ್ತಿದ್ದ ಭಾರತದಲ್ಲಿಯೂ ಈ ಯುದ್ದ ವಿಚಾರವಾಗಿ ರಾಜಕೀಯ ಗದ್ದಲಗಳು ಉಂಟಾಗಿದೆ.
ಇಡೀ ಭೂಮಿ ಪ್ಯಾಲೆಸ್ತೀನ್‌ಗೆ ಸೇರಿದ್ದು, ಇಸ್ರೇಲ್ ಬಂದು ಆ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿಕೆಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ನೀಡಿದ್ದಾರೆ. ಹಮಾಸ್ ಪರವಾಗಿ ಹೋರಾಡಲು ಶರದ್ ಪವಾರ್ ಅವರು ಸುಪ್ರಿಯಾ ಸುಳೆ ಅವರನ್ನು ಗಾಜಾಕ್ಕೆ ಕಳುಹಿಸುತ್ತಾರೆ ಎಂದು ಹಿಮಂತ ಬಿಸ್ವಾ ಶರ್ಮಾ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಹಿಮಂತ ಮಾತನಾಡಿ, ಇಂತಹಾ ವಿಚಾರದಲ್ಲಿ ರಾಜಕಾರಣದ ಬಗ್ಗೆ ಯೋಚಿಸುವ ಬದಲು ಭಯೋತ್ಪಾದನೆಯನ್ನು ತಡೆಯಲು ಯೋಚಿಸಬೇಕೆಂದು ಶರದ್ ಪವಾರ್ ರನ್ನು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದು ಕೊಂಡಿದ್ದಾರೆ. ಇದೀಗ ಈ ವಿಚಾರಕ್ಕೆ ವಿವಿಧ ರೀತಿಯ ಟೀಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಫಡ್ನವೀಸ್ ಅವರು ಶರದ್ ಪವಾರ್ ಅವರ ಪ್ಯಾಲೆಸ್ತೀನ್ ಅನ್ನು ಬೆಂಬಲಿಸುವ ಹೇಳಿಕೆಯನ್ನು ಖಂಡಿಸಿ, ಇಸ್ರೇಲ್-ಪ್ಯಾಲೆಸ್ತೀನ್ ವಿವಾದದಲ್ಲಿ ಭಾರತ ಎಂದಿಗೂ ತನ್ನ ನಿಲುವನ್ನು ಬದಲಾಯಿಸಿಲ್ಲ ಎಂದರು.