ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಆರಂಭದ ಹಂತದಲ್ಲಿ ಭಾರಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಇದೀಗ ಹಿನ್ನಡೆ ಅನುಭವಿಸಿದೆ. ಸೋಲಿನ ಭಯದಲ್ಲಿರುವ ಕಾಂಗ್ರೆಸ್ ಇದೀಗ ಭಾರತದ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪವನ್ನು ಮಾಡಿದೆ. ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯ ಸಭಾ ಸದಸ್ಯರೂ ಆಗಿರುವ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಲ್ಲಿ ಬಿಜೆಪಿ ಹಾಗೂ ಭಾರತದ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ‘ಲೋಕಸಭಾ ಚುನಾವಣೆಯಂತೆ, ಹರಿಯಾಣದಲ್ಲಿ ನಾವು ಮತ್ತೆ ಭಾರತದ ಚುನಾವಣಾ ಆಯೋಗ (ECI) ವೆಬ್‌ಸೈಟ್‌ನಲ್ಲಿ ಅಪ್-ಟು-ಡೇಟ್ ಟ್ರೆಂಡ್‌ಗಳನ್ನು ಅಪ್‌ಲೋಡ್ ಮಾಡುವ ನಿಧಾನಗತಿಯನ್ನು ನೋಡುತ್ತಿದ್ದೇವೆ. ಭಾರತೀಯ ಚುನಾವಣಾ ಆಯೋಗದ ಹಳತಾದ ಮತ್ತು ದಾರಿತಪ್ಪಿಸುವ ಪ್ರವೃತ್ತಿಗಳನ್ನು ಹಂಚಿಕೊಳ್ಳುವ ಮೂಲಕ ಆಡಳಿತದ ಮೇಲೆ ಒತ್ತಡವನ್ನು ಹೆಚ್ಚಿಸಲು ಬಿಜೆಪಿ ಪ್ರಯತ್ನಿಸುತ್ತಿದೆಯೇ’ ಎಂದು ಪ್ರಶ್ನಿಸಿದ್ದಾರೆ.
