ಚಂಡೀಗಢ : ಹರಿಯಾಣ ವಿಧಾನಸಭೆಯ ಎಲ್ಲಾ 90 ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 5ರ ವರೆಗೆ ನಡೆಯಲಿದೆ. ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ, ಕುಸ್ತಿಪಟು ವಿನೇಶ್ ಫೋಗಟ್, ಜೆಜೆಪಿಯ ನಾಯಕ ದುಷ್ಯಂತ್ ಚೌಟಾಲಾ ಸೇರಿದಂತೆ ಒಟ್ಟು 1,031 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ಮತದಾರರು ನಿರ್ಧರಿಸಲಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತಿರುವ 1,031 ಅಭ್ಯರ್ಥಿಗಳ ಪೈಕಿ 101 ಮಹಿಳೆಯರಿದ್ದು, 464 ಮಂದಿ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ.
ಒಟ್ಟು 2.04 ಕೋಟಿ ಮಂದಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 8,821 ಶತಾಯುಷಿಗಳೂ ಸೇರಿದ್ದಾರೆ ಎಂದು ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿ ಪಂಕಜ್ ಅಗರ್‌ವಾಲ್ ತಿಳಿಸಿದ್ದಾರೆ.