ಕಣ್ಣೂರು: ಕಣ್ಣೂರು–ಆಳಪ್ಪುಳ ಎಕ್ಸಿಕ್ಸೂಟಿವ್ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಘಟನೆ ಇಂದು ಕಣ್ಣೂರು ರೈಲು ನಿಲ್ದಾಣದ ಬಳಿ ನಡೆದಿದೆ.
ಇಂದು ಮುಂಜಾನೆ ಸುಮಾರು 4.40 ರ ವೇಳೆಗೆ ರೈಲನ್ನು ಪ್ಲಾಟ್ ಫಾರ್ಮ್ ಗೆ ತರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಈ ಅವಘಡ ಸಂಭವಿಸಿದ ವೇಳೆ ಅದೃಷ್ಟವಶಾತ್ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಇನ್ನು ಬೋಗಿಗಳು ಹಳಿ ತಪ್ಪಿದ ಕಾರಣದಿಂದಾಗಿ ರೈಲು ಹೊರಡುವಲ್ಲಿ ಒಂದು ಗಂಟೆ ವಿಳಂಬವಾಗಿದೆ ಎಂದು ರೈಲ್ವೆ ಮೂಲಗಳಿಂದ ತಿಳಿದುಬಂದಿದೆ.
ರೈಲಿನ ಹಿಂದಿನ ಎರಡು ಬೋಗಿಗಳು ಹಳಿ ತಪ್ಪಿದ ಪರಿಣಾಮ ಸಿಗ್ನಲ್ ಬಾಕ್ಸ್ ಗೆ ಹಾನಿಯುಂಟಾಗಿದೆ. ಈ ಅವಘಡವು ಮುಖ್ಯ ಟ್ರ್ಯಾಕ್ ಗೆ ಸಮಾನಾಂತರವಾದ ಟ್ರ್ಯಾಕ್ ನಲ್ಲಿ ಸಂಭವಿಸಿದ್ದು, ಇದರಿಂದ ಇತರೆ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ಇನ್ನು ಹಳಿ ತಪ್ಪಿದ ಎರಡು ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದೆ. ಆ ಬಳಿಕ ರೈಲು ತನ್ನ ಪ್ರಯಾಣವನ್ನು ಮುಂದುವರೆಸಿತು. ಈ ಘಟನೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ರೈಲ್ವೆ ಅಧಿಕಾರಿಗಳು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.