ಬಕ್ಸರ್ : ಬಿಹಾರದಲ್ಲಿ ರಾತ್ರಿ ರೈಲಿನ 6 ಬೋಗಿ ಹಳಿ ತಪ್ಪಿದ್ದು ನಾಲ್ಕು ಮಂದಿ ಸಾವನ್ನಪ್ಪಿದ್ದು, 70 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬಿಹಾರದ ಬಕ್ಸರ್ ಜಿಲ್ಲೆಯ ಬಳಿ ದೆಹಲಿಯಿಂದ ಗುವಾಹಟಿಗೆ ಹೊರಟಿದ್ದ ನಾರ್ತ್ ಈಸ್ಟ್ ಎಕ್ಸ್ ಪ್ರೆಸ್ ರೈಲು 12506 ನಂಬರಿನ ರೈಲು ಹಳಿ ತಪ್ಪಿದೆ. ಬಿಹಾರದ ರಘುನಾಥಪುರ ರೈಲು ನಿಲ್ದಾಣದ ಬಳಿ ಬುಧವಾರ ರಾತ್ರಿ 9-30 ಕ್ಕೆ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ 70ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ದುರಾದೃಷ್ಟವಶಾತ್ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ರೈಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಅಸ್ತವ್ಯಸ್ತಗೊಂಡಿದ್ದಕ್ಕೆ ಪ್ರಯಾಣಿಕರು ಗಾಬರಿಗೊಂಡು ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೆಹಲಿಯ ಆನಂದ್ ವಿಹಾರ್ ನಿಲ್ದಾಣದಿಂದ ರೈಲು ಅಸ್ಸಾಂನ ಗುವಾಹಟಿಯ ಕಾಮಾಖ್ಯ ಜಂಕ್ಷನ್ ಗೆ ಹೋಗುವ ಸಂದರ್ಭದಲ್ಲಿ ಅವಘಡ ಸಂಭವಿಸಿ, ಆರು ಎಸಿ ಬೋಗಿಗಳು ಪಲ್ಟಿಯಾಗಿ ರೈಲ್ವೇ ಹಳಿ ಮೇಲೆ ಬಿದ್ದಿದೆ. ತಕ್ಷಣವೇ ರೈಲ್ವೆ ಮತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ವೈದ್ಯಕೀಯ ತಂಡ ಸ್ಥಳಕ್ಕೆ ತೆರಳಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಬಕ್ಸರ್ ಸಂಸದ ಕೇಂದ್ರ ಸಚಿಚ ಅಶ್ವಿನಿ ಕುಮಾರ್ ಚೌಬೆ ರೈಲು ಹಳಿತಪ್ಪಿದ ಬಗ್ಗೆ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಇನ್ನು ಬಿಹಾರ ರೈಲ್ವೆ ಅಪಘಾತಕ್ಕೆ ಸಂಬಂಧಿಸಿದಂತೆ, ಜನರಿಗೆ ಮಾಹಿತಿ ನೀಡಲು ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನೂ ನೀಡಿದೆ. ಪಾಟ್ನಾ ಸಹಾಯವಾಣಿ- 9771449971 ಡಣಾಪುರ ಸಹಾಯವಾಣಿ- 8905697493 ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್- 9794849461, 8081206628 ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಾಣಿಜ್ಯ ನಿಯಂತ್ರಣ- 8081212134 ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ತಕ್ಷಣವೇ ಹಳಿಯನ್ನು ಮೊದಲಿನ ಸ್ಥಿತಿಗೆ ತರಲಾಗುವುದು. ಹಳಿ ತಪ್ಪಲು ಮೂಲ ಕಾರಣವೇನೆಂದು ತಿಳಿಯುತ್ತೇವೆಂದು ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಟ್ವೀಟ್ ಮಾಡಿದ್ದಾರೆ.