ದೆಹಲಿ: ಹಳೆಯ ಸಂಸತ್ ಕಟ್ಟಡವನ್ನು ಸಂವಿಧಾನ ಸದನ ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಹಳೇ ಸಂಸತ್ ಭವನದಲ್ಲಿನ ಕೊನೆಯ ಭಾಷಣದ ನಂತರ ಮೋದಿ, ಎಲ್ಲಾ ಸಂಸದರನ್ನ ಹೊಸ ಸಂಸತ್ತಿನ ಕಟ್ಟಡಕ್ಕೆ ಕರೆದೊಯ್ದರು. ಈ ಹೊಸ ಸಂಸತ್ ಕಟ್ಟಡ ಇಂದಿನಿಂದ ಭಾರತದ ಅಧಿಕೃತ ಭಾರತೀಯ ಸಂಸತ್ ಆಗಿದೆ.
ಇಂದು, ನಾವು ಇದನ್ನು ಬಿಟ್ಟು ಹೊಸ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ. ಇಂದು ಗಣೇಶ ಚತುರ್ಥಿಯಾಗಿರುವುದರಿಂದ ಇದು ಮಂಗಳಕರ ಎಂದು ಪ್ರಧಾನಿ ಹೇಳಿದರು. ಬಳಿಕ ಉಭಯ ಸದನಗಳ ಸ್ಪೀಕರ್‌ಗಳ ಕಡೆಗೆ ತಿರುಗಿ ನಿಮ್ಮಲ್ಲಿ ನಾನು ಮನವಿ ಮಾಡುತ್ತಿದ್ದೇನೆ. ಸಮಾಲೋಚನೆಯ ನಂತರ ನೀವು ಅದನ್ನು ಪರಿಗಣಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದರು.
ಈಗ ನಾವು ಅಲ್ಲಿಗೆ (ಹೊಸ ಸಂಸತ್ತಿನ ಕಟ್ಟಡ) ಹೋಗುತ್ತಿದ್ದೇವೆ, ಈ ಸದನದ ಈ ಘನತೆ ಎಂದಿಗೂ ಕಡಿಮೆಯಾಗಬಾರದು. ನಾವು ಇದನ್ನು ‘ಹಳೆಯ ಸಂಸತ್’ ಎಂದು ಕರೆಯಬಾರದು. ನೀವಿಬ್ಬರೂ ಅನುಮತಿ ನೀಡಿದರೆ ಈ ಕಟ್ಟಡವು ನಮಗೆ ಸದಾ ಸ್ಪೂರ್ತಿಯಾಗುವಂತೆ ‘ಸಂವಿಧಾನ ಸದನ’ ಎಂದು ಕರೆಯಲ್ಪಡಲಿ ಎಂದು ವಿನಂತಿಸುತ್ತೇನೆ ಎಂದರು. ಸಂವಿಧಾನ ಸದನ ಎಂದು ಕರೆಯುವಾಗ ಒಮ್ಮೆ ಇಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಕುಳಿತಿದ್ದ ಮಹಾನ್ ವ್ಯಕ್ತಿಗಳ ನೆನಪುಗಳು ಅದರೊಂದಿಗೆ ಬೆಸೆದುಕೊಳ್ಳುತ್ತವೆ. ಮುಂದಿನ ಪೀಳಿಗೆಗೆ ಈ ಉಡುಗೊರೆಯನ್ನು ನೀಡಲಿರುವ ಈ ಅವಕಾಶವನ್ನು ನೀವು ಬಿಟ್ಟುಕೊಡಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.