ನವದೆಹಲಿ: ಭಾರತೀಯ ಬ್ಯಾಂಕುಗಳಿಂದ ಕೋಟಿಗಟ್ಟಲೆ ಸಾಲ ಪಡೆದು ಅದನ್ನು ತೀರಿಸಲಾಗದೇ ಭಾರತ ಬಿಟ್ಟು ಹೋಗಿ ಬ್ರಿಟನ್ ನಲ್ಲಿ ನೆಲೆಸಿರುವ ಮದ್ಯದ ದೊರೆ ವಿಜಯ್ ಮಲ್ಯನನ್ನು ಯಾವುದೇ ಪೂರ್ವ ಷರತ್ತುಗಳಿಲ್ಲದೇ ಹಸ್ತಾಂತರ ಮಾಡಬೇಕು ಎಂದು ಫ್ರಾನ್ಸ್ ಅಧಿಕಾರಿಗಳಿಗೆ ಭಾರತ ಸರಕಾರ ಮನವಿ ಮಾಡಿದೆ ಎಂದು ವರದಿಗಳು ತಿಳಿಸಿದೆ.
ಎ.15ರಂದು ನಡೆದ ಉಗ್ರ ನಿಗ್ರಹ ಕುರಿತ ಭಾರತ-ಫ್ರಾನ್ಸ್ ಜಂಟಿ ಕಾರ್ಯಪಡೆಯ 16ನೇ ಸಭೆಯಲ್ಲಿ ಈ ಕುರಿತು ಪ್ರಸ್ತಾವಿಸಲಾಯಿತು. ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಿರುವ ವಿಜಯ್ ಮಲ್ಯ ಬ್ರಿಟನ್‌ನಲ್ಲಿ ನೆಲೆಸಿದ್ದು, ಈಗಾಗಲೇ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದೆ. ಒಂದು ವೇಳೆ ಮಲ್ಯ ಫ್ರಾನ್ಸ್‌ಗೆ ತೆರಳಿದರೆ ಮುಂದೆ ಕೈಗೊಳ್ಳಬೇಕಾದ ಕಾನೂನು ಪ್ರಕ್ರಿಯೆಯನ್ನು ಭಾರತ ಮೊದಲೇ ಆರಂಭಿಸಿದೆ.
ಈ ವೇಳೆ ಕೆಲವು ಷರತ್ತುಗಳೊಂದಿಗೆ ಮಲ್ಯ ಹಸ್ತಾಂತರಿಸುವುದಾಗಿ ಫ್ರಾನ್ಸ್ ಹೇಳಿತು. ಆದರೆ ಬೇಷರತ್ತಾಗಿ ಮಲ್ಯ ಹಸ್ತಾಂತರಿಸಲು ಫ್ರಾನ್ಸ್ ಒಪ್ಪಬೇಕು ಎಂದು ಭಾರತ ಕೋರಿತು. ಪ್ರಸ್ತುತ ಮಲ್ಯ ಬ್ರಿಟನ್‌ನಲ್ಲಿದ್ದಾರೆ. ಆದರೆ ಫ್ರಾನ್ಸ್‌ನಲ್ಲೂ ಅವರು ಆಸ್ತಿ ಹೊಂದಿದ್ದಾರೆ. ಬೇರೆ ದೇಶಕ್ಕೆ ಪಲಾಯನ ಮಾಡದಂತೆ, ಅವರು ಆಸ್ತಿ ಹೊಂದಿರುವ ದೇಶಗಳ ಜತೆಗೆ ಗಡೀಪಾರು ಕುರಿತು ಭಾರತ ಮಾತುಕತೆ ನಡೆಸುತ್ತಿದೆ.