ನಮ್ಮ ಚರ್ಮದ ಕೋಮಲತೆ ಹಾಗೂ ಕಲೆ ರಹಿತ ಚರ್ಮ ಪಡೆಯಲು ನಾವು ಏನೆಲ್ಲಾ ಮನೆಮದ್ದುಗಳನ್ನು ಮಾಡುತ್ತೇವೆ ಅಲ್ವಾ? ಅವೆಲ್ಲಕ್ಕಿಂತಲೂ ಬಹಳ ಸುಲಭವಾಗಿ ಕೋಮಲವಾದ ಚರ್ಮ ನಿಮ್ಮದಾಗಬೇಕಾದರೆ ಹಾಲಿನ ಕೆನೆಯನ್ನು ಹಚ್ಚಿಕೊಳ್ಳಿ. ಇದು ಸುಲಭವೂ ಹೌದು ಕಡಿಮೆ ಖರ್ಚಿನಲ್ಲೂ ಆಗುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಹಾಲು ಬಳಸುತ್ತಾರೆ. ನೀವು ಮಾಡಬೇಕಾಗಿರುವುದಿಷ್ಟೇ ಹಾಲು ಕಾಯಿಸಿದ ನಂತರ ಮೇಲೆ ಬಂದಿರುವ ಹಾಲಿನ ಕೆನೆಯನ್ನು ತೆಗೆದು ಬಳಸುವುದು. ಇದು ಬಹಳ ಹಿಂದಿನಿಂದಲೂ ಅನುಸರಿಸಿಕೊಂಡು ಬರುತ್ತಿರುವಂತಹ ಸಿಂಪಲ್ ಟಿಪ್ಸ್ ಆಗಿದೆ. ಪ್ರತಿಯೊಬ್ಬರಿಗೂ ತಮ್ಮ ಮುಖ ಹಾಗೂ ದೇಹದ ಚರ್ಮ ಕಾಂತಿಯುತವಾಗಿರಬೇಕೆಂಬ ಆಸೆ ಇರುತ್ತದೆ. ಕಾಂತಿಯುತ ಚರ್ಮಕ್ಕೆ ಹಾಲಿನ ಕೆನೆಯನ್ನು ನೇರವಾಗಿ ನಿಮ್ಮ ಚರ್ಮಕ್ಕೆ ಹಚ್ಚಿ. ನೀವು ಇದನ್ನು ಫೇಸ್‌ಪ್ಯಾಕ್ ರೀತಿ ಅರಿಶಿನದ ಜೊತೆಯೂ ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು. ಹಾಲಿನ ಕೆನೆ ಪದರವು ಚರ್ಮಕ್ಕೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ಕೆನೆಯು ತ್ವಚೆಗೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ ಮತ್ತು ನಿಮ್ಮ ತ್ವಚೆಯನ್ನುಕೋಮಲವಾಗಿಸುತ್ತದೆ ಜೊತೆಗೆ ಯೌವನದಿಂದ ಕೂಡಿರುವಂತೆಯೂ ಮಾಡುತ್ತದೆ. ನೀವು ಸ್ವಲ್ಪಕೆನೆಯನ್ನು ತೆಗೆದುಕೊಂಡು ನಿಮ್ಮ ಮುಖಕ್ಕೆ ಹಚ್ಚಿ ಮಸಾಜ್ ಮಾಡಿರಿ. ಮಸಾಜ್ ಮಾಡುವುದರಿಂದ ಮುಖದ ಚರ್ಮವು ಅದನ್ನು ಹೀರುತ್ತದೆ. ಇದರಿಂದ ನಿಮ್ಮ ಚರ್ಮ ತೇವಾಂಶದಿಂದ ಕೂಡಿರುತ್ತದೆ. ಚರ್ಮವು ಹವಾಮಾನಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಬೇಸಿಗೆಯಲ್ಲಿ ಚರ್ಮ ಟ್ಯಾನ್ ಆಗುತ್ತದೆ. ಈ ಟ್ಯಾನಿಂಗ್‌ನ್ನು ಹೋಗಲಾಡಿಸಲು ಹಾಲಿನ ಕೆನೆ ಸಹಕಾರಿಯಾಗಿದೆ. ಇದು ನಮ್ಮ ಚರ್ಮವನ್ನು ಕಾಂತಿಯುತಗೊಳಿಸಲು ಮತ್ತು ಟ್ಯಾನ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು, ಚರ್ಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ವಯಸ್ಸಾಗುತ್ತಾ ಹೋದಂತೆ ಮುಖದಲ್ಲಿ ವಯಸ್ಸು ಕಾಣಲು ಆರಂಭವಾಗುತ್ತದೆ. ನೆರಿಗೆಗಳು, ಸುಕ್ಕು ಕಟ್ಟಿದ ಚರ್ಮದ ಸಮಸ್ಯೆ ಉಂಟಾಗುವುದು ಸಾಮಾನ್ಯ. ಈ ಚಿಹ್ನೆಗಳು ಕಾಣಿಸಿಕೊಳ್ಳಬಾರದೆಂದರೆ ಚೆನ್ನಾಗಿ ಚರ್ಮದ ಆರೈಕೆ ಮಾಡಬೇಕು. ಹಾಲಿನ ಕೆನೆಯಲ್ಲಿ ಪ್ರೋಟೀನ್ ಮತ್ತು ವಿಟಮಿನ್‌ಗಳಿವೆ, ಇದು ಕಾಲಜನ್ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ, ಇದು ವಯಸ್ಸಾದ ಚಿಹ್ನೆಗಳನ್ನು ತಡೆಯುತ್ತದೆ. ಮುಖ ಮೇಲೆ ಕಪ್ಪು ಕಲೆಗಳು ಹಾಗೂ ಮೊಡವೆ ಕಲೆಗಳನ್ನು ಹೋಗಲಾಡಿಸಲು ಹಾಲಿನ ಕೆನೆ ಸಹಕಾರಿಯಾಗಿದೆ. ಕಲೆಗಳಿರುವ ಜಾಗಲ್ಲಿ ಕೆನೆಯನ್ನು ಸವರಿ ಮಸಾಜ್ ಮಾಡುವುದರಿಂದ ಕಲೆಗಳು ಕ್ರಮೇಣ ಕಡಿಮೆಯಾಗುತ್ತದೆ. ನೀವು ಇದಕ್ಕೆ ಕೆಲವು ಹನಿ ನಿಂಬೆರಸವನ್ನು ಸೇರಿಸಿ ಹಚ್ಚುವುದರಿಂದ ಇನ್ನೂ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಹೆಚ್ಚಿನ ಪ್ರೊಟೀನ್ ಹೊಂದಿರುವ ಹಾಲಿನ ಕ್ರೀಮ್ ನಮ್ಮ ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಕೂದಲಿನ ಹಾನಿಯಿಂದ ರಕ್ಷಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಕಾರಣವಾಗುವ ಪ್ರೋಟೀನ್‌ನನ್ನು ಹೊಂದಿದೆ. ಹಾಗಾಗಿ ನೀವು ಹಾಲಿನ ಕೆನೆಯನ್ನು ಮುಖದ ಸೌಂದರ್ಯಕ್ಕೂ ಕೂಲಿನ ಸೌಂದರ್ಯಕ್ಕೂ ಒಳ್ಳೆಯದು.