ಬೆಂಗಳೂರು: ಸಿದ್ದರಾಮಯ್ಯನವರು ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಾಗ ಮಂಗಳೂರಿನಲ್ಲಿ ಇರುವುದು ಬಿಜೆಪಿ ಸರ್ಕಾರನಾ? ಅಥವಾ ತಾಲಿಬಾನ್ಗಳದ್ದಾ? ಎಂದು ಜೋರಾಗಿ ಮಾತನಾಡುತ್ತಿದ್ದರು. ಈಗ ಹಾವೇರಿಯಲ್ಲಿ ನಡೆದ ನೈತಿಕ ಪೊಲಿಸ್ ಗಿರಿ ಬಗ್ಗೆ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಪ್ರಕರಣದ ಬಗ್ಗೆ ಒಂದೇ ಒಂದು ಧ್ವನಿ ಎತ್ತುತ್ತಿಲ್ಲ ಎಂದು ಸಿಎಂ ವಿರುದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಹಾವೇರಿಯಲ್ಲಿ ಅಲ್ಪ ಸಂಖ್ಯಾತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ. ಮೊದಲಿಗೆ ಪೊಲೀಸರು ಈ ವಿಚಾರವನ್ನು ತಳ್ಳಿ ಹಾಕಿ ಆರೋಪಿಗಳಿಗೆ ಜಾಮೀನು ಸಿಗುವಂತ ಪ್ರಕರಣ ದಾಖಲಿಸಿದರು. ಆದರೂ ಕೂಡ ಯುವತಿ ಯಾರಿಗೂ ಹೆದರದೇ ತನ್ನ ಮೇಲಾಗಿರುವ ದೌರ್ಜನ್ಯವನ್ನು ಹೇಳಿಕೊಂಡಿದ್ದಾಳೆ.
ಇನ್ನು ಕೂಡ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳುವ ರೀತಿ ಕಾಣುತ್ತಿಲ್ಲ. ಇದರಿಂದ ಪ್ರಕರಣ ಗಂಭೀರವಾಗಿದೆ. ಮತ್ತೊಂದು ಬಾರಿ ಯುವತಿಯ ಮೆಡಿಕೆಲ್ ಟೆಸ್ಟ್ ಆಗಬೇಕು. ಸಿಎಂ ಸಿದ್ದರಾಮಯ್ಯನವರು ಅಲ್ಪ ಸಂಖ್ಯಾತರ ಗುರುಗಳು. ಇಲ್ಲಿ ಅಲ್ಪ ಸಂಖ್ಯಾತ ಯುವತಿಗೆ ಅನ್ಯಾಯವಾಗಿದೆ. ಆ ಯುವತಿಯ ರಕ್ಷಣೆಗೂ ಮುಂದೆ ಬರುತ್ತಿಲ್ಲ ಎಂದು ಆರೋಪಿಸಿದರು.
ಈಗಾಗಲೇ ರಾಜ್ಯದಲ್ಲಿ ಒಂಬತ್ತು ತಿಂಗಳಲ್ಲಿ ಶೇ. 30% ರಷ್ಟು ಅಪರಾಧ ಪ್ರಕರಣಗಳು ದಾಖಲಾಗಿವೆ. ಇನ್ನು ಈ ಪ್ರಕರಣದಲ್ಲಿ ಭಾಗಿಯಾದ ಗ್ಯಾಂಗ್ ಹಿಂದೆ ಇದಕ್ಕೂ ಮೊದಲು ಹಲವು ಪ್ರಕರಣಗಳು ದಾಖಲಾಗಿದ್ದವು. ಆದರೆ ಅದನ್ನು ಮುಚ್ಚಿ ಹಾಕಲಾಗಿದೆ. ಅದನ್ನೂ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಈ ಪ್ರಕರಣಗಳ ಕುರಿತು ತನಿಖೆ ನಡೆಸಲು ಪ್ರತ್ಯೇಕ ತಂಡ ರಚನೆ ಮಾಡಬೇಕು ಎಂದು ಒತ್ತಹಿಸಿದರು.