ಹಾಸನ: ಇಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುಮಾರಣ್ಣ ಹಾಸನ ಜಿಲ್ಲೆಗೆ ಬರಬೇಕೆಂದು ಕಾರ್ಯಕರ್ತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಲಾಪ ಮುಗಿದ ನಂತರ ಹಾಸನದಲ್ಲಿ ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲು ಯೋಚಿಸಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆ ನಂತರ ಪ್ರಥಮ ಬಾರಿಗೆ ಹಾಸನ ಜಿಲ್ಲೆಯಲ್ಲಿ ಆಗಿರುವ ಅನಾಹುತ ನೋಡಲು ಬಂದಿದ್ದೇನೆ. ಚುನಾವಣೆ ಫಲಿತಾಂಶ ನಂತರ, ಚುನಾವಣೆ ಆಸುಪಾಸಿನಲ್ಲಿ ಕೆಲವು ಅಹಿತರಕರ ಘಟನೆಗಳು ಪಕ್ಷದ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ನಿರಾಸೆ ಮೂಡಿಸಿವೆ ಎಂದು ಸುದ್ದಿಗಾರರಿಗೆ ಹೇಳಿದರು. ಮುಂದೆ ಹಾಸನ ಜಿಲ್ಲೆಯ ಕಾರ್ಯಕರ್ತರಿಗೆ ನೈತಿಕ ಸ್ಟೈರ್ಯ ತುಂಬಲು ಬರುತ್ತೇನೆ. ಹಾಸನದಲ್ಲಿ ಬೃಹತ್ ಸಮಾವೇಶ ಮಾಡುವಂತೆ ಶಾಸಕರ ಒತ್ತಾಯ ಇದೆ. ರೇವಣ್ಣ ಅವರ ನೇತೃತ್ವದಲ್ಲಿ ಶಾಸಕರುಗಳನ್ನು ಒಳಗೊಂಡು ನಾನು ಸೇರಿ ಪಕ್ಷ ಸಂಘಟನೆ ಮಾಡುತ್ತೇವೆ. ಈ ಜಿಲ್ಲೆಯ ಜನರ ಋಣವನ್ನು ತೀರಿಸುತ್ತೇವೆ. ಈಗ ರೇವಣ್ಣ ಅವರ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿವೆ. ಆದರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಯಾರೂ ಮರೆಯುವಂತಿಲ್ಲ. ಎಲ್ಲರಿಗಿಂತ ಒಂದು ಹೆಜ್ಜೆ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ. ಬೆಂಗಳೂರಿನ ಮದರ್ ಡೇರಿ ಮೀರಿಸುವ ರೀತಿಯಲ್ಲಿ ಹಾಸನದಲ್ಲಿ ಮೆಗಾ ಡೇರಿ ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿನ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಅದನ್ನು ಮಾಡುತ್ತಿದ್ದಾರೆ ಎಂದರು.