ಹಾಸನ: ಹಾಸನಾಂಬೆ ದೇವಿ ದರ್ಶನದ ಐದನೇ ದಿನದಂದು ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಆಗಮಿಸಿ ದೇವಿ ದರ್ಶನ ಪಡೆದರು. ನಂತರ ಮಾತನಾಡಿದ ಸಿಎಂ, ಹಾಸನ ನಗರಸಭೆ ಆಗಿರುವುದನ್ನು ಮೇಲ್ದರ್ಜೆಗೆ ಏರಿಸಿ ನಗರ ಪಾಲಿಕೆಯನ್ನಾಗಿ ಮಾಡಬೇಕೆಂದು ನನಗೆ ಹೇಳಿದ್ದರು.
ನಾನು ಹಾಸನಾಂಬೆ ಜಾತ್ರೆಗೆ ಬರುವ ಮುಂಚಿತವಾಗಿ ಕ್ಯಾಬಿನೆಟ್ ಇತ್ತು. ಸಭೆಯಲ್ಲಿ ಪ್ರಸ್ತಾಪ ತಂದು ಹಾಸನವನ್ನು ನಗರಪಾಲಿಕೆಯನ್ನಾಗಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈಗ ಹಾಸನ ನಗರಪಾಲಿಕೆ ಆಗಿದೆ ಎಂದು ಹಾಸನಾಂಬೆ ದೇವಸ್ಥಾನದಲ್ಲಿ ಸಿಹಿ ಸುದ್ದಿ ಹೇಳುವ ಮೂಲಕ ನೆರೆದಿದ್ದವರ ಮುಖ ಅರಳುವಂತೆ ಮಾಡಿದರು. ಹಾಸನಾಂಬೆ ದೇವಿ ದರ್ಶನದ ನಂತರ ಮುಖ್ಯಮಂತ್ರಿಗಳು ಅಪಾರ ಸಂಖ್ಯೆಯಲ್ಲಿ ಹಾಜರಿದ್ದ ಭಕ್ತರನ್ನು ನೋಡಿ ಹಾಗೂ ಅಚ್ಚುಕಟ್ಟಾಗಿ ದೇವಾಲಯ ಇಟ್ಟಿರುವ ಜಿಲ್ಲಾಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.