ಚಿಕ್ಕಮಗಳೂರು: ಭಾರತದಲ್ಲಿ ಹಿಂದೂಗಳು ಕಡಿಮೆಯಾದರೆ ಅದು ಮೊಘಲ್‍ಸ್ಥಾನ, ಅಥವಾ ಪಾಕಿಸ್ತಾನವಾಗುತ್ತದೆ. ಹಿಂದೂಗಳು ಬಹುಸಂಖ್ಯಾತರಾಗಿದ್ದಾಗ ಮಾತ್ರ ಭಾರತ ಹಾಗೂ ಸಂವಿಧಾನ ಉಳಿಯುತ್ತದೆ. ಹಿಂದೂಗಳು ಅಲ್ಪಸಂಖ್ಯಾತರಾದಲ್ಲಿ ಭಾರತ ಹಾಗೂ ಸಂವಿಧಾನ ಉಳಿಯುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಹಿಂದೂ ರಾಷ್ಟ್ರವಾದಲ್ಲಿ ಅಫ್ಘಾನಿಸ್ತಾನವಾಗಲು ಅವಕಾಶವಿರುವುದಿಲ್ಲ. ಕಾಂಗ್ರೆಸ್, ಎಸ್ ಡಿಪಿಐ ಮತ್ತು ಪಿಎಫ್ ಐ ಬೆಂಬಲಿಸುವಂತಹ ನೀತಿ. ನಿಮ್ಮ ಮನಸ್ಸಿಂದ ತಾಲಿಬಾನ್ ಚಿಂತನೆಯನ್ನು ದೂರ ಮಾಡಿ. ಇತಿಹಾಸ ಅರಿಯದವನು ಇತಿಹಾಸವನ್ನು ಸೃಷ್ಟಿ ಮಾಡಲಾರ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನದ್ದು ಹಿಂದೂಗಳನ್ನು ದುರ್ಬಲಗೊಳಿಸುವುದು, ಹಿಂದೂಗಳನ್ನು ಒಡೆದಾಳುವ ನೀತಿಯಾಗಿದೆ. ಇದು ಮತ್ತೊಂದು ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನದ ಸೃಷ್ಟಿಗೆ ಕಾರಣವಾಗದಿರಲಿದೆ. ಈ ಹಿಂದೆ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಇವುಗಳು ಅಖಂಡ ಭಾರತದ ಭಾಗವಾಗಿತ್ತು. ಅಫ್ಘಾನಿಸ್ತಾನ ಗಾಂಧಾರಿಯ ತವರು ಮನೆಯಾಗಿದ್ದು, ಅಲ್ಲಿ ನೂರಕ್ಕೆ ನೂರರಷ್ಟು ಹಿಂದೂಗಳಿದ್ದರು. ಮತ್ತೆ ಈಗ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರೆ ಭಾರತ ಪಾಕಿಸ್ತಾನವಾಗುತ್ತದೆ. ಒಂದು ವೇಳೆ ಹಿಂದೂಗಳು ಒಗ್ಗಟ್ಟಿನಿಂದ ಇದ್ದರೆ ಪಾಕಿಸ್ತಾನ ಎಂಬ ವಿಚಾರವೇ ಬರುವುದಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ.