ಚಿತ್ರದುರ್ಗ : ಹಿಂದೂ ಧರ್ಮ ಅಂದ್ರೆ ಅನೈತಿಕ, ಅನಾಚಾರ. ಹಿಂದೂ ಧರ್ಮವೇ ಅಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯ ತರಳಬಾಳು ಮಠದ ಪಂಡಿತರಾಧ್ಯ ಶ್ರೀಗಳು ವಿವಾದದ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಶ್ರೀಗಳು ನೀಡಿರೋ ವಿವಾದಾತ್ಮಕ ಹೇಳಿಕೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಹೊಳಲ್ಕೆರೆಯಲ್ಲಿ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ 30ನೇ ಸ್ಮರಣಾ ಕಾರ್ಯಕ್ರಮ ಹಾಗೂ ಚಿನ್ಮೂಲಾದ್ರಿಯ ಚಿತ್ಕಳೆ ಸ್ಮರಣೋತ್ಸವ ಸಂಪುಟ ಲೋಕಾರ್ಪಣೆ ಸಮಾರಂಭದಲ್ಲಿ ಬಸವತತ್ವ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ‘ಹಿಂದೂ ಧರ್ಮದಲ್ಲಿರುವ ವೇದ, ಪುರಾಣಗಳು, ಶಾಸ್ತ್ರಗಳು, ಲಿಂಗಾಯತ ಧರ್ಮದ ಮೂಲಗಳಲ್ಲ. ಹಾಗಾಗಿ ಹಿಂದೂ ಧರ್ಮದ ಭಾಗ ಲಿಂಗಾಯತ ಧರ್ಮ ಎನ್ನುವುದು ಸರಿಯಲ್ಲ’ ಎಂದರು. ‘ಹಿಂದೂ ಎನ್ನುವುದು ಅನೈತಿಕ, ಅನಾಚಾರಗಳಿಂದ ಒಳಗೊಂಡಿದೆ. ಇಂಥ ಧರ್ಮವನ್ನು ಶರಣರು ನಿರಾಕರಿಸಿ ಜಾತ್ಯತೀತ ತತ್ವಗಳನ್ನು ಒಳಗೊಂಡ ಲಿಂಗಾಯತ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ವಚನಗಳಲ್ಲಿ ಲಿಂಗಾಯತ ಧರ್ಮದ ಸಾರವನ್ನು ನಾಡಿಗೆ ಬಿತ್ತರಿಸಿ ಸಾಕ್ಷಾತ್ಕರಿಸಿದ್ದಾರೆ. ಹಾಗಾಗಿ ಯಾವತ್ತೂ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ ಹೊರತು ಹಿಂದೂ ಧರ್ಮಕ್ಕೆ ಸಂಬಂಧಿಸಿಲ್ಲ’ ಎಂದು ಹೇಳಿದರು. ಅಹಿಂಸಾ ಜೀವನ ನಡೆಸಬೇಕು ಎಂದು ಬಸವಣ್ಣ ಹೇಳಿದ್ದರು. ಸಿಂಧೂ ನದಿಯ ಬೈಲಲ್ಲಿ ಇರುವವರು ಕೂಡ ಎಲ್ಲರೂ ಹಿಂದುಗಳು ಎಂದರು. ನಮ್ಮದು ಸ್ವತಂತ್ರ ಲಿಂಗಾಯತ ಧರ್ಮ. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವೇ ಅಲ್ಲ. ಮಲ್ಲಿಕಾರ್ಜುನ ಸ್ವಾಮೀಜಿ ಬಸವ ತತ್ವದ ನಿಷ್ಠರಾಗಿದ್ದರು. ಈಗಿನ ದಿನಗಳಲ್ಲಿ ಸ್ವಾಮೀಜಿಗಳೆಲ್ಲರೂ ನಿಷ್ಠೆಯನ್ನು ಬಿಟ್ಟಿದ್ದೇವೆ. ಬದಲಾಗಬೇಕಿರುವುದು ಭಕ್ತರಲ್ಲ ಸ್ವಾಮೀಜಿಗಳು ಎಂದು ಅವರು ತಿಳಿಸಿದರು. ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ ಮಾತನಾಡಿ, ‘ಹಿಂದೂ ಧರ್ಮ ಎಲ್ಲ ಧರ್ಮಗಳ ಮೂಲ ಪರಂಪರೆ. ವೀರಶೈವ, ಲಿಂಗಾಯತ, ಜೈನ, ಬುದ್ಧ ಧರ್ಮದ ಮೂಲ ಬೇರು ಹಿಂದೂ ಧರ್ಮವೇ. ಹಾಗಾಗಿ ನಾವೆಲ್ಲರೂ ಹಿಂದೂ ಧರ್ಮದ ಮೂಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ವೀರಶೈವ ಹಾಗೂ ಲಿಂಗಾಯತ ತತ್ವ ಸಿದ್ಧಾಂತಗಳಲ್ಲಿ ನಾವೆಲ್ಲ ಒಂದಾಗಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.