ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಎಫ್ಐಆರ್ ದಾಖಲು..! ಯಾಕೆ ಗೊತ್ತಾ…?

ಶಿವಮೊಗ್ಗ: ʻʻಹಿಂದುಗಳು ಕೂಡ ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಬೇಕು. ಪ್ರತಿ ಮನೆಯಲ್ಲೂ ತಲವಾರು ಪೂಜೆ ನಡೆಯಬೇಕುʼʼ ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ ಕಾರಣಕ್ಕಾಗಿ ಹಿಂದು ಸಂಘಟನೆಗಳ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ (Arun Kumar puthila) ಅವರ ವಿರುದ್ಧ ಶಿವಮೊಗ್ಗ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ. ಕಳೆದ ಭಾನುವಾರ ಈದ್‌ ಮೆರವಣಿಗೆಯ ವೇಳೆ ಭಾರಿ ದೊಂಬಿಗೆ ಸಾಕ್ಷಿಯಾದ ಶಿವಮೊಗ್ಗದ ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಮನೆ ಮಂದಿಯನ್ನು ಮಾತನಾಡಿಸುವ ವೇಳೆ ಅರುಣ್‌ ಕುಮಾರ್‌ ಅವರು ಆಕ್ರೋಶದಲ್ಲಿ ಪ್ರಚೋದನಾಕಾರಿ ಮಾತುಗಳನ್ನು ಆಡಿದ್ದರು. ಅರುಣ್‌ ಕುಮಾರ್‌ ಪುತ್ತಿಲ ಅವರು ಪುತ್ತೂರಿನ ಹಿಂದು ಮುಖಂಡರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷ ಟಿಕೆಟ್‌ ನೀಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದು ಸ್ವತಂತ್ರವಾಗಿ ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದ್ದರು, ಬಿಜೆಪಿ ಸೋಲಿಗೆ ಕಾರಣರಾಗಿದ್ದರು.

ಸರ್ಕಾರ ಮುಸ್ಲಿಮ್ ತುಷ್ಠೀಕರಣಕ್ಕಾಗಿ ಒಂದು ಕೋಮಿನ ಜನರನ್ನು ಬೆಂಬಲಿಸುತ್ತಿದೆ. ರಾಗಿಗುಡ್ಡದಲ್ಲಿ ಮತಾಂಧ ಮುಸ್ಲಿಂ ಸಮುದಾಯದಿಂದ ದೊಂಬಿ ಘಟನೆ ನಡೆದಿದೆ ಎಂದು ಅವರು ಹೇಳಿದ್ದರು. ಗಲಭೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಮಾತನಾಡಿದ ಅರುಣ್‌ ಕುಮಾರ್‌ ಪುತ್ತಿಲ ಅವರು, ʻʻತೊಂದರೆಗೆ ಒಳಗಾದವರಿಗೆ ಸಾಂತ್ವನ ಹೇಳಲು ಇಲ್ಲಿಗೆ ಆಗಮಿಸಿದ್ದೇನೆ. ಅವರ ಜೊತೆಗೆ ನಾವಿದ್ದೇವೆʼʼ ಎಂದಿದ್ದರು. ʻʻಮುಸ್ಲಿಂ ಪುಷ್ಟೀಕರಣಕ್ಕೆ, ಮುಸ್ಲಿಂ ಮತಗಳನ್ನು ಓಲೈಸಲು ಸರಕಾರ ಮತಾಂಧ ಶಕ್ತಿಗೆ ಕುಮ್ಮಕ್ಕು ಕೊಡ್ತಿದೆ. ಇದು ಪೂರ್ವ ನಿಯೋಜಿತ ಕೃತ್ಯ. ಈ ಭಾಗದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಇದರಿಂದ ಹಿಂದು ಸಮಾಜಕ್ಕೆ ದೊಡ್ಡ ಶಕ್ತಿ ಬರುತ್ತದೆ ಎಂಬ ಕಾರಣಕ್ಕಾಗಿ ಬೆದರಿಸಲು ಇಂಥ ಕೃತ್ಯಗಳು ನಡೆದಿವೆʼʼ ಎಂದು ಅವರು ಆಪಾದಿಸಿದ್ದರು.

ʻʻರೋಹನ್ ಎನ್ನುವ ಯುವಕನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ, ವಾಹನ ಜಖಂ ಆಗಿದೆ. ತಮಗೇ ಪಾಠ ಕಲಿಸಿದ ಶಿಕ್ಷಕರ ಮನೆಗೇ ನುಗ್ಗಿ ಮುಸ್ಲಿಂ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಈ ಘಟನೆ ಇಡೀ ನಾಗರೀಕ ಸಮುದಾಯ ತಲೆ ತಗ್ಗಿಸುವಂತಾಗಿದೆʼʼ ಎಂದಿದ್ದ ಅರುಣ್‌ ಕುಮಾರ್‌ ಪುತ್ತಿಲ, ʻʻಅನೇಕ ರೀತಿಯ ದಾಳಿ, ನೋವು ಅಪಮಾನದ ನಡುವೆ ಹಿಂದು ಸಮಾಜ ಬದುಕಬೇಕಾಗಿದೆʼʼ ಎಂದಿದ್ದರು.

Advertisement

ಸ್ಕ್ರೂ ಡ್ರೈವರ್, ‌ ಸ್ಪ್ಯಾನರ್ ಕೈ ಬಿಡಿ, ತಲ್ವಾರ್‌ಗಳಿಗೆ ಪೂಜೆ ಮಾಡಿ

ʻʻಸರಕಾರ ತಲ್ವಾರ್ ಹಿಡಿದು ಮೆರವಣಿಗೆಗೆ ಅವಕಾಶ ಕೊಡುತ್ತದೆ ಅಂದರೆ ಅವರಿಗೆ ಯಾವ ರೀತಿಯ ಸಹಕಾರ ಸಿಗಬಹುದು ನೀವೇ ನೋಡಿ. ಮಾರಕಾಸ್ತ್ರ ಹಿಡಿದು ಹಿಂದು ಸಮಾಜದ ಮೇಲೆ, ಹಿಂದು‌ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಸರ್ಕಾರವೇ ಸಹಕಾರ ಕೊಡುತ್ತದೆʼʼ ಎಂದಿದ್ದ ಅರುಣ್‌ ಕುಮಾರ್‌ ಪುತ್ತಿಲ, ನಮ್ಮಲ್ಲೂ ತಲ್ವಾರ್, ಶಸ್ತ್ರಾಸ್ತ್ರ ಇದೆ. ಅಗತ್ಯ ಬಿದ್ದರೆ ಇದೇ ಶಸ್ತ್ರಾಸ್ತ್ರ ಮೂಲಕ ಪ್ರತಿಕ್ರಿಯೆ ಕೊಡಲು ಹಿಂದು ಸಮಾಜ ಸಿದ್ದವಿದೆ. ನವರಾತ್ರಿ ದಿನ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡ್ತೇವೆ. ಆವತ್ತು ಪ್ರತಿ ಮನೆಯಲ್ಲಿಯೂ ತಲ್ವಾರ್ ಗಳಿಗೆ ಪೂಜೆ ಮಾಡಬೇಕು. ಸ್ಕ್ರೂ ಡ್ರೈವರ್, ‌ ಸ್ಪ್ಯಾನರ್ ಕೈ ಬಿಡಿ, ತಲ್ವಾರ್‌ಗಳಿಗೆ ಪೂಜೆ ಮಾಡಿʼʼ ಎಂದು ನುಡಿದಿದ್ದರು.

ʻʻಶಿವಮೊಗ್ಗದಲ್ಲಿ ಪೊಲೀಸರ ಮೇಲೆಯೂ ಹಲ್ಲೆ ನಡೆದಿದೆ. ನನಗೆ ಪೊಲೀಸರ ‌ಬಗ್ಗೆ ಗೌರವ ಇದೆ. ಆದರೆ, ಸರಕಾರ ಪೊಲೀಸರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡ್ತಿದೆ. ಇಲಾಖೆಗೆ ಪಾರದರ್ಶಕವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು. ಸಮಾಜಕ್ಕೆ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆಗೆ ರಕ್ಷಣೆ ಕೊಡಬೇಕಾದ ಕೆಲಸ ಮಾಡದೇ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕುʼʼ ಎಂದು ಪುತ್ತಿಲ ಹೇಳಿದ್ದರು.

ಸ್ವಯಂಪ್ರೇರಿತ ಕೇಸು ದಾಖಲು

ಹಿಂದು ಮುಖಂಡ ಅರುಣಕುಮಾರ ಪುತ್ತಿಲ ಅವರ ಭಾಷಣವನ್ನು ಕೇಳಿಸಿಕೊಂಡ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸುಮೊಟೊ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮನೆಯಲ್ಲಿದ್ದ ಆಯುಧಗಳಿಗೆ ಪೂಜೆ ಮಾಡಿ ಎಂದಿರುವುದು ಪ್ರಚೋದನಕಾರಿ ಹೇಳಿಕೆ ಎಂದು ಆಪಾದಿಸಲಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement