ಧಾರವಾಡ : ಧಾರವಾಡ ದಾನೇಶ್ವರನಗರದ ಮುಸ್ಲಿಂ ಕುಟುಂಬವೊಂದು ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಪಿತೃಪಕ್ಷದ ಪರ್ವಕಾಲದಲ್ಲಿ ಪಿತೃಕಾರ್ಯ ನೆರವೇರಿಸಿದೆ. ಕಾರ್ಪೆಂಟರ್ ಕೆಲಸ ಮಾಡುವ ಹುಸೇನ್‌ಸಾಬ್ ಎನ್ನುವವರ ಕುಟುಂಬ ಧಾರವಾಡದ ಜ್ಯೋತಿಷಿ ಒಬ್ಬರ ಸಲಹೆ ಮೇರೆಗೆ ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನವನ್ನು ಗೋಕರ್ಣದ ಪಿತೃಶಾಲೆಯಲ್ಲಿ ಪೂರೈಸಿದೆ. ಇವರು ಮೊದಲಿನಿಂದಲೂ ಕುಂಡಲಿ, ಜಾತಕ, ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ. ಇವರ ಕುಟುಂಬ ಗದಗಿನ ವೀರನಾರಾಯಣ ದೇವಸ್ಥಾನದ ಹತ್ತಿರ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದವರ ಜೊತೆಯಲ್ಲಿಯೇ ಒಡನಾಟ ಹೊಂದಿದೆ. ಹುಸೇನ್‌ಸಾಬ್‌ನ ತಮ್ಮನಿಗೆ ಹೆಣ್ಣು ಸಿಗದೇ ಇದ್ದಾಗ ಜ್ಯೋತಿಷಿಯ ಮೊರೆ ಹೋಗಿದ್ದರಂತೆ. ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉದ್ಯೋಗದಲ್ಲಿ ಏಳ್ಗೆ ಸಿಗಲಿ ಎಂಬ ಉದ್ಧೇಶದಿಂದ ಈ ಕಾರ್ಯ ಮಾಡಿದ್ದಾರಂತೆ. ಜ್ಯೋತಿಷಿ ತೋರಿಸಿದ ಮಾರ್ಗದರ್ಶನದಂತೆ ಗೋಕರ್ಣಕ್ಕೆ ಬಂದು ಕ್ಷೇತ್ರ ಪುರೋಹಿತರಾದ ವೇ.ನಾಗರಾಜ ಭಟ್ ಗುರುಲಿಂಗ ಹಾಗೂ ವೇ. ಸುಬ್ರಹ್ಮಣ್ಯ ಚಿತ್ರಿಗೆಮಠ ಇವರ ನೇತೃತ್ವದಲ್ಲಿ ಎಲ್ಲಾ ಪೂಜಾ ಕಾರ್ಯ ನೆರವೇರಿಸಿದ್ದಾರೆ. ಗೋಕರ್ಣದಲ್ಲಿ ಕ್ರಿಶ್ಚಿಯನ್ ಸಮುದಾಯದವರು ಇಂತಹ ಪಿತೃ ಕಾರ್ಯ ನೆರವೇರಿಸಿದ ಅನೇಕ ಉದಾಹರಣೆಗಳಿವೆ. ಆದರೆ ಮುಸ್ಲಿಂ ಕುಟುಂಬ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಪಿತೃಕಾರ್ಯ ಮಾಡಿದ್ದು ವಿಶೇಷವಾಗಿದೆ.