ನವದೆಹಲಿ: ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಮುಂಬೈನ ಖಾಸಗಿ ಕಾಲೇಜು ಆದೇಶ ನೀಡಿದೆ. ಈ ಆದೇಶಕ್ಕೆ ಸುಪ್ರೀಮ್ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಹಿಜಾಬ್ ಅನ್ನು ನಿಷೇಧಿಸಿದರೆ ಮಹಿಳಾ ಸಬಲೀಕರಣವನ್ನು ಹೇಗೆ ಸಾಧಿಸಬಹುದು ಎಂದು ನ್ಯಾಯಾಲಯವು ಕಾಲೇಜು ಆಡಳಿತವನ್ನು ಕೇಳಿದೆ. ಈ ಬಗ್ಗೆ ತುರ್ತು ವಿಚಾರಣಾ ಮನವಿಯನ್ನು ಸುಪ್ರೀಮ್ ಕೋರ್ಟ್ ನಿರಾಕರಿಸಿದೆ. ಈ ಮೂಲಕ ಇದಕ್ಕೂ ಮುನ್ನ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸಹ ತಡೆಯೊಡ್ಡಿದಂತಾಗಿದೆ. ಕಾಲೇಜು ಆಡಳಿತ ಮಂಡಳಿಯ ವರ್ತನೆಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಯಾವುದನ್ನು ಧರಿಸಬಹುದು? ಯಾವುದನ್ನು ಧರಿಸಬಾರದು ಎಂಬುದನ್ನು ನೀವು ಹೇಗೆ ನಿರ್ಧರಿಸುತ್ತೀರಿ? ವಿದ್ಯಾರ್ಥಿನಿಯರು ಯಾವ ಬಟ್ಟೆ ಧರಿಸಬೇಕೆಂದು ಕಾಲೇಜುಗಳು ನಿರ್ಧರಿಸಿದರೆ ಮಹಿಳಾ ಸಬಲೀಕರಣದ ಅರ್ಥವೇನು ಎಂದು ಈ ಸಂದರ್ಭದಲ್ಲಿ ಪೀಠ ಪ್ರಶ್ನಿಸಿದೆ. ಕಾಲೇಜಿನಲ್ಲಿ ಎಲ್ಲರೂ ಸಮಾನರು. ಇದು ಧಾರ್ಮಿಕ ಪ್ರದರ್ಶನಕ್ಕೆ ವೇದಿಕೆಯಾಗಬಾರದು ಎಂಬ ಉದ್ದೇಶದಿಂದ ಹಿಜಾಬ್ ಅನ್ನು ನಿಷೇಧಿಸಲಾಗಿದೆ ಎಂದು ಮುಂಬೈನ ಚೆಂಬೂರು ಕಾಲೇಜಿನ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಹೆಸರಿನಲ್ಲೂ ಧರ್ಮವಿದೆ. ಅದನ್ನು ಹೇಗೆ ತೆಗೆದುಹಾಕುತ್ತೀರಿ ಎಂದು ಕಾಲೇಜು ಆಡಳಿತ ಮಂಡಳಿಗೆ ಪ್ರಶ್ನಿಸಿತು. ಹೆಣ್ಣುಮಕ್ಕಳು ಏನು ಧರಿಸಬೇಕು ಎಂಬುದು ಅವರ ವೈಯಕ್ತಿಕ ನಿರ್ಧಾರ. ದೇಶದಲ್ಲಿ ಅನೇಕ ಧರ್ಮೀಯರು ವಾಸಿಸುತ್ತಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿಗೆ ತಿಳಿದಿಲ್ಲವೇ? ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಂತಹ ವಿಷಯಗಳು ಇನ್ನೂ ಚರ್ಚೆಯಾಗುತ್ತಿರುವುದು ದುರದೃಷ್ಟಕರ ಎಂದ ಸುಪ್ರೀಮ್ ಕೋರ್ಟ್ ನವೆಂಬರ್ 18ಕ್ಕೆ ಮುಂದೂಡಿತು.