ಹಿಟ್ ಅಂಡ್ ರನ್ ಕೇಸ್‍ನಲ್ಲಿ ಮರಣ ಹಾಗೂ ಗಾಯಗೊಂಡವರಿಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಕಾಲಮಿತಿಯಲ್ಲಿ ಪರಿಹಾರ.!

WhatsApp
Telegram
Facebook
Twitter
LinkedIn

 

  ದಾವಣಗೆರೆ:  ಕೇಂದ್ರ ಸರ್ಕಾರದ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಮೋಟಾರು ವಾಹನಗಳ ಕಾಯಿದೆಯಡಿ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿ ಮರಣ ಹೊಂದುವ ಸಂಸ್ರಸ್ಥರಿಗೆ ಹಾಗೂ ಗಾಯಾಳುಗಳಿಗೆ ಕಾಲಮಿತಿಯಲ್ಲಿ ಪರಿಹಾರ ಪಡೆಯಲು ಅವಕಾಶ ಇದ್ದು ಅರ್ಹರು ಈ ಯೋಜನೆಯಿಂದ ವಂಚಿತರಾಗಬಾರದೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು.

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಹಿಟ್ ಅಂಡ್ ರನ್ ಯೋಜನೆ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಪರಿಚಿತ ವಾಹನದಿಂದ ಅಪಘಾತವಾಗಿ ಮರಣ ಹೊಂದಿದಲ್ಲಿ ರೂ. 2 ಲಕ್ಷ ಮತ್ತು ತೀವ್ರ ಸ್ವರೂಪದ ಗಾಯಾಳುಗಳಾದಲ್ಲಿ ಯಾವುದೇ ಮಧ್ಯಸ್ಥರಿಲ್ಲದೇ ರೂ.50 ಸಾವಿರ ಪರಿಹಾರ ಪಡೆಯುವ ಯೋಜನೆ ಇದಾಗಿದೆ. ಪರಿಹಾರವನ್ನು ನೇರವಾಗಿ ಅವರ ಖಾತೆಗೆ ಯುನೈಟೆಡ್ ಇನ್ಸೂರೆನ್ಸ್ ಕಂಪನಿ ಮೂಲಕ ಪಾವತಿಸಲಾಗುತ್ತದೆ.

ಅಪಘಾತವಾಗುವ ವ್ಯಾಪ್ತಿಯ ಠಾಣೆಗಳಲ್ಲಿ ಠಾಣಾಧಿಕಾರಿಗಳು ಎಫ್‍ಐಆರ್ ದಾಖಲಿಸಿ ಹಿಟ್ ಅಂಡ್ ರನ್ ಪ್ರರಕರಣವಾಗಿದ್ದಲ್ಲಿ ಅರ್ಜಿ ನಮೂನೆ ನೀಡಿ ಮೃತರ ವಾರಸುದಾರರು ಹಾಗೂ ಗಾಯಾಳುಗಳ ಕುಟುಂಬದವರಿಗೆ ಮಾಹಿತಿ ನೀಡಬೇಕು. ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳು ಕ್ಲೇಮ್ ತನಿಖಾಧಿಕಾರಿಗಳಾದ ಇವರಿಗೆ ಅರ್ಜಿ ಸಲ್ಲಿಸಲು ತಿಳಿಸಬೇಕು. ಈ ಬಗ್ಗೆ ಠಾಣಾಧಿಕಾರಿಗಳಿಗೂ ಮಾಹಿತಿಯ ಕೊರತೆ ಇದ್ದು ಪ್ರತ್ಯೇಕ ಸಭೆ ಮಾಡುವ ಮೂಲಕ ತರಬೇತಿ ನೀಡಲಾಗುತ್ತದೆ ಎಂದರು.

ಸಂತ್ರಸ್ಥರ ವಾರಸುದಾರರು, ಕುಟುಂಬದವರು ನಮೂನೆ-1 ರಲ್ಲಿ ವಿವರ ದಾಖಲಿಸಿ ಎಫ್‍ಐಆರ್ ಸಿ.ರಿಪೋರ್ಟ್, ಬ್ಯಾಂಕ್ ಪಾಸ್ ಬುಕ್, ನಮೂನೆ-4 ರಲ್ಲಿ ವಾರಸತ್ವ, ಮರಣೋತ್ತರ ವರದಿ, ಮರಣ ಪ್ರಮಾಣ ಪತ್ರ, ತೀವ್ರ ಗಾಯಗೊಂಡಿದ್ದಲ್ಲಿ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆ ದಾಖಲೆ, ಆಧಾರ್ ಪ್ರತಿಯೊಂದಿಗೆ ಅಪಘಾತ ಸಂಭವಿಸಿದ ವ್ಯಾಪ್ತಿಯ ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಗೆ ಸಂತ್ರಸ್ಥರು ಅರ್ಜಿ ಸಲ್ಲಿಸಬೇಕು.

ತಹಶೀಲ್ದಾರರು ಅಥವಾ ಉಪವಿಭಾಗಾಧಿಕಾರಿಗಳು ಪರಿಹಾರದ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ನಮೂನೆ-2 ರಲ್ಲಿ ಶಿಫಾರಸಿನೊಂದಿಗೆ ಅರ್ಜಿ ಸ್ವೀಕೃತವಾದ 30 ದಿನಗಳೊಳಗಾಗಿ ಕ್ಲೈಮ್ ಸೆಟಲ್‍ಮೆಂಟ್ ಅಧಿಕಾರಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಬೇಕು. 15 ದಿನಗಳೊಳಗಾಗಿ ಜಿಲ್ಲಾಧಿಕಾರಿಯವರು ಅರ್ಜಿ ಪರಿಶೀಲಿಸಿ ನಮೂನೆ-3 ರಲ್ಲಿ ಪರಿಹಾರದ ಆದೇಶ ಮಂಜೂರು ಮಾಡಿ ಜನರಲ್ ಇನ್ಸೂರೆನ್ಸ್ ಕೌನ್ಸಿಲ್‍ಗೆ ಪರಿಹಾರ ಪಾವತಿಗೆ ರವಾನಿಸುವರು. ಅಲ್ಲಿಂದ 15 ದಿನಗಳೊಳಗಾಗಿ ಸಂತ್ರಸ್ಥರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಇದು ಯೋಜನೆ ಕ್ಲೈಮ್ ಪಡೆಯುವ ಪ್ರಕ್ರಿಯೆಯಾಗಿದೆ.

ಈ ಯೋಜನೆಯಡಿ ಜಿಲ್ಲಾಧಿಕಾರಿಗಳ ಕಚೇರಿಯಿಂದ 7 ಪ್ರಕರಣಗಳಲ್ಲಿ ಪರಿಹಾರ ಒದಗಿಸಿದ್ದು 7 ಪ್ರಕರಣಗಳು ಮಂಜೂರಾತಿ ಹಂತದಲ್ಲಿವೆ. ಸಾರ್ವಜನಿಕರು ಈ ಯೋಜನೆಯ ಬಳಕೆ ಮಾಡಿಕೊಳ್ಳಬೇಕು ಮತ್ತು ಸಂಕಷ್ಟದಲ್ಲಿದ್ದವರಿಗೆ ಪರಿಹಾರ ತಲುಪುವಂತೆ ಜಾಗೃತಿ ಮೂಡಿಸಲು ಆಸ್ಪತ್ರೆ, ಪೊಲೀಸ್ ಠಾಣೆ, ಹೆದ್ದಾರಿ ಫಲಕಗಳಲ್ಲಿ ಮಾಹಿತಿ ಫಲಕ ಅಳವಡಿಸಲು ಸೂಚನೆ ನೀಡಿದರು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 

BC Suddi   About Us
For Feedback - [email protected]

Related News

LATEST Post

WhatsApp Icon Telegram Icon