ಮುಂಬೈ: ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಮಿಹಿರ್ ಶಾ ಅವರ ತಂದೆ ರಾಜೇಶ್ ಶಾ ಅವರನ್ನು ಶಿವಸೇನೆಯ ಉಪ ನಾಯಕ ಸ್ಥಾನದಿಂದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಇಂದು ವಜಾಗೊಳಿಸಿದ್ದಾರೆ.
ಭಾನುವಾರದಂದು ವರ್ಲಿಯಲ್ಲಿ ಮಿಹಿರ್ ಚಲಾಯಿಸುತ್ತಿದ್ದ ಕಾರು ಸ್ಕೂಟರ್ ಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಮಹಿಳೆ ಸಾವನ್ನಪ್ಪಿ, ಮಹಿಳೆಯ ಪತಿ ಗಾಯಗೊಂಡಿದ್ದರು. ಘಟನೆಯ ಬಳಿಕ ಮಿಹಿರ್ ಶಾ ಪರಾರಿಯಾಗಿದ್ದನು. ಮಿಹಿರ್ ಶಾ ಬಂಧನಕ್ಕಾಗಿ ಮುಂಬೈ ಪೊಲೀಸರು 14 ತಂಡಗಳನ್ನು ರಚಿಸಿದ್ದರು. ಹಿಟ್ ಆಂಡ್ ರನ್ ಪ್ರಕರಣ ನಡೆದ ಎರಡು ದಿನಗಳ ಬಳಿಕ ಪ್ರಮುಖ ಆರೋಪಿ ಮಿಹಿರ್ ಶಾನನ್ನು ಪೊಲೀಸರು ಬಂಧಿಸಿದ್ದರು.
ಅಪಘಾತದ ಸಮಯದಲ್ಲಿ ಬಿಎಂಡಬ್ಲ್ಯು ಕಾರಿನಲ್ಲಿದ್ದ ರಾಜೇಶ್ ಶಾ ಮತ್ತು ಅವರ ಚಾಲಕನನ್ನು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ನಂತರ ಮುಂಬೈನ ನ್ಯಾಯಾಲಯ ರಾಜೇಶ್ ಶಾಗೆ ಜಾಮೀನು ನೀಡಿತ್ತು. ಆರೋಪಿ ತಮ್ಮ ನಾಯಕನ ಮಗನಾಗಿರುವುದರಿಂದ ಶಿವಸೇನಾ ಏನೂ ಮಾಡುವುದಿಲ್ಲ ಎಂದು ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಮಹಿಳೆಯ ಪತಿ ಆರೋಪಿಸಿದ್ದರು.