ನವದೆಹಲಿ: ಸದ್ಯ ಕುಳಿತುಕೊಂಡು ಹೋಗುವ ವ್ಯವಸ್ಥೆಯಲ್ಲಿ ‘ವಂದೇ ಭಾರತ್ ರೈಲು’ಗಳು ಈಗಾಗಲೇ ದೇಶದ ಹಲವು ಪ್ರದೇಶಗಳಲ್ಲಿ ಸಂಚಾರ ಮಾಡುತ್ತಿದೆ. ಇದೀಗ ಸ್ಲೀಪರ್ ವರ್ಶನ್ ವಂದೇ ಭಾರತ್ ರೈಲು ಬಂದರೆ ಅದರ ವಿನ್ಯಾಸ ಹೇಗಿರುತ್ತದೆ. ರೈಲಿನ ಒಳಗೆ ಯಾವೆಲ್ಲಾ ರೀತಿಯ ವ್ಯವಸ್ಥೆಗಳಿರುತ್ತವೆ ಎನ್ನುವ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಜೊತೆಗೆ, ‘ಮುಂಬರುವ ವಂದೇ ಭಾರತ್ ಸ್ಲೀಪರ್ ರೈಲುಗಳ ಪರಿಕಲ್ಪನೆ… ಶೀಘ್ರದಲ್ಲಿ …2024 ರ ಆರಂಭದಲ್ಲಿ’ ಎಂದು ಬರೆದುಕೊಂಡಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಫೋಟೋಗಳಲ್ಲಿ ಕಾಣುವಂತೆ, ವಂದೇ ಭಾರತ್ ಸ್ಲೀಪರ್ ರೈಲುಗಳು ಎರಡು ಮತ್ತು ಮೂರು ಹಂತದ ಆಯ್ಕೆಗಳನ್ನು ಹೊಂದಿರುತ್ತದೆ. ಇದರ ಬರ್ತ್ ವಿನ್ಯಾಸವು ರಾಜಧಾನಿ ಮತ್ತು ಇತರ ಪ್ರೀಮಿಯಂ ರೈಲುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಹೊಸ ಸ್ಲೀಪರ್ ವಂದೇ ಭಾರತ್ ರೈಲು ಮುಂದಿನ ವರ್ಷ ಯಾವಾಗ ಜನರಿಗೆ ಲಭ್ಯವಾಗಲಿದೆ ಎಂದು ರೈಲ್ವೆ ಸಚಿವರು ಸ್ಪಷ್ಟಪಡಿಸಿಲ್ಲ. ಇದನ್ನು ಫೆಬ್ರವರಿ 2024 ರಲ್ಲಿ ಪ್ರಾರಂಭಿಸಬಹುದು ಎನ್ನಲಾಗುತ್ತಿದೆ. ವಂದೇ ಭಾರತ್ ರೈಲುಗಳನ್ನು ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF)ನಲ್ಲಿ ತಯಾರಿಸಲಾಗುತ್ತಿದೆ. ಇದನ್ನು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಭಾರತದಲ್ಲಿ ತಯಾರಿಸಿದ ರೈಲು ಎಂದು ಬಿಂಬಿಸಲಾಗುತ್ತಿದೆ. ಭಾರತೀಯ ರೈಲ್ವೇ ಅಕ್ಟೋಬರ್ 1ರಿಂದ ವಂದೇ ಭಾರತ್ ರೈಲುಗಳ ಪರಿಕಲ್ಪನೆಯನ್ನು ಪರಿಚಯಿಸಿದೆ, ಇದರ ಅಡಿಯಲ್ಲಿ ಕೋಚ್‌ಗಳನ್ನು ಕೇವಲ 14 ನಿಮಿಷಗಳಲ್ಲಿ ಸ್ವಚ್ಛಗೊಳಿಸಲಾಗುತ್ತದೆ. ಈ ಪರಿಕಲ್ಪನೆಯನ್ನು ಜಪಾನ್‌ನ ಬುಲೆಟ್ ಟ್ರೈನ್ ಮಾದರಿಯಿಂದ ನಿರೂಪಿಸಲಾಗಿದೆ. ಅಲ್ಲಿ ರೈಲುಗಳನ್ನು ಏಳು ನಿಮಿಷಗಳಲ್ಲಿ ಸ್ವಚ್ಛಗೊಳಿಸಲಾಗುತ್ತದೆ. ಭಾರತದಲ್ಲಿ ಮೊದಲ ವಂದೇ ಭಾರತ್ ರೈಲು ಸಂಚಾರ ನವದೆಹಲಿ ಮತ್ತು ವಾರಾಣಸಿ ನಡುವೆ ಫೆಬ್ರವರಿ 15, 2019ರಂದು ಆರಂಭವಾಗಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು.