ಹೀರೆಕಾಯಿ ತಂದಾಗ ಅದರ ಸಿಪ್ಪೆ ಬಿಸಾಡುವ ಬದಲು ರುಚಿಕರವಾದ ಚಟ್ನಿ ಮಾಡಿಕೊಂಡು ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು:
ಹೀರೆಕಾಯಿ ಸಿಪ್ಪೆ – 1 ಕಪ್, 4 ಟೇಬಲ್ ಸ್ಪೂನ್ – ಕಡಲೆಬೀಜ, 4 – ಹಸಿಮೆಣಸು, 1 ಟೀ ಸ್ಪೂನ್ ಜೀರಿಗೆ, 2 ಎಸಳು – ಬೆಳ್ಳುಳ್ಳಿ, ಉಪ್ಪು – ರುಚಿಗೆ ತಕ್ಕಷ್ಟು, 1 ದಂಡು – ಕರಿಬೇವು, ¼ ಟೀ ಸ್ಪೂನ್ – ಸಾಸಿವೆ, ¼ ಟೀ ಸ್ಪೂನ್ – ಜೀರಿಗೆ, 2 ಟೀ ಸ್ಪೂನ್ – ಎಣ್ಣೆ, 1 ಟೀ ಸ್ಪೂನ್ – ಲಿಂಬೆಹಣ್ಣಿನ ರಸ. ಸ್ಟವ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಹೀರೆಕಾಯಿ ಸಿಪ್ಪೆ ಹಾಕಿ 3 ನಿಮಿಷಗಳ ಕಾಲ ಫ್ರೈ ಮಾಡಿ ಒಂದು ಪ್ಲೇಟ್ ಗೆ ತೆಗೆದುಕೊಂಡು ತಣ್ಣಗಾಗಲು ಬಿಡಿ.
ಅದೇ ಪ್ಯಾನ್ ಗೆ ಹಸಿಮೆಣಸು, ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ನಂತರ ಕಡಲೆಬೀಜ ಹಾಕಿ ಫ್ರೈ ಮಾಡಿ. ಇದನ್ನೆಲ್ಲಾ ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಜೀರಿಗೆ, ಬೆಳ್ಳುಳ್ಳಿ, ಉಪ್ಪು ಹಾಕಿ ನಯವಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ ನಂತರ ನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ. ನಂತರ ಗ್ಯಾಸ್ ಮೇಲೆ ಒಗ್ಗರಣೆ ಸೌಟು ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗುತ್ತಲೆ ¼ ಟೀ ಸ್ಪೂನ್ ಸಾಸಿವೆ, 1/4 ಟೀ ಸ್ಪೂನ್ ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿಕೊಂಡು ಚಟ್ನಿಗೆ ಹಾಕಿ ಸರ್ವ್ ಮಾಡಿ.