ಬೆಂಗಳೂರು: ಹುಬ್ಬಳ್ಳಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಪೊಲೀಸರ ಲೋಪವೂ ಇದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ತವ್ಯ ಲೋಪದಡಿ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಮಹಿಳಾ ಹೆಡ್ ಕಾನ್ ಸ್ಟೇಬಲ್ ಅವರನ್ನು ಅಮಾನತು ಮಾಡಲಾಗಿದೆ. ನನ್ನ ಮೊಮ್ಮಗಳಿಗೆ ಜೀವ ಬೆದರಿಕೆ ಇದೆ ಎಂದು ಅಂಜಲಿಯ ಅಜ್ಜಿ ಪೊಲೀಸರಿಗೆ ದೂರು ನೀಡಿರಲಿಲ್ಲ, ಕೇವಲ ಮಾಹಿತಿ ನೀಡಿದ್ದರು. ಅಂಜಲಿ ಪೋಷಕರು ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದ್ದೇವು ಎಂದು ಹೇಳಿದ್ದಾರೆ ಎಂದರು.
ಸದ್ಯ ಕೊಲೆ ಆರೋಪಿ ವಿಶ್ವನನ್ನು ಪೊಲೀಸರು ಅರೆಸ್ಟ್ ಮಾಡಲಾಗಿದೆ. ಆತನ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಎಸ್ಐಟಿ ವರದಿ ಮಂಡ್ಯ ಶಾಸಕರಿಗೆ ಸಿಗುತ್ತೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಕರಣ ಇನ್ನೂ ತನಿಖೆ ಆಗುತ್ತಿದೆ. ಅನೇಕ ವಿಚಾರವನ್ನು ಸಾರ್ವಜನಿಕಗೊಳಿಸುವಂತಿಲ್ಲ. ಮಂಡ್ಯ ಶಾಸಕರಿಗೆ ಯಾರು ಮಾಹಿತಿ ನೀಡುತ್ತಾರೆ? ಆರೋಪ ಸುಲಭ, ಆದರೆ ನಾವು ಯಾವ ಮುಲಾಜಿಗೆ ಒಳಪಡಲ್ಲ. ಎಸ್ ಟಿಐ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ನಮಗೆ, ಸಿಎಂಗೆ ಯಾವ ಮಾಹಿತಿ ಕೊಡಬೇಕು ಕೊಡುತ್ತಾರೆ ಎಂದು ತಿಳಿಸಿದರು.