‘ಒಂದು ವಿಷಯ ಅದ್ಭುತವಾಗಿ ಅರಿತೆ. ಪ್ರೀತಿಸುವವರು 1000 ಜನ ಇದ್ದರೂ ವಿಷಯವಿಲ್ಲದೆ ದ್ವೇಷ ಮಾಡುವ 100 ಜನರು ಇದ್ದೇ ಇರುತ್ತಾರೆ’ ಎಂದು ಹುಲಿ ಉಗುರಿನ ಲಾಕೆಟ್ ಕುರಿತು ಸಂಸದ ಜಗ್ಗೇಶ್ ಬೇಸರದ ಟ್ವೀಟ್ ಮಾಡಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನ ಒಂದರಲ್ಲಿ ‘ತಾಯಿ ಹುಲಿ ಉಗುರಿನ ಪೆಂಡೆಂಟ್ ನೀಡಿದ್ದರು’ ಎಂಬುದಾಗಿ ಜಗ್ಗೇಶ್ ಒಪ್ಪಿಕೊಂಡಿದ್ದರು. ಹೀಗಾಗಿ, ಅರಣ್ಯ ಅಧಿಕಾರಿಗಳು ಬೆಂಗಳೂರಿನ ಮಲ್ಲೇಶ್ವರದಲ್ಲಿ ಇರುವ ಅವರ ನಿವಾಸಕ್ಕೆ ಬಂದು ಶೋಧ ನಡೆಸಿದ್ದಾರೆ. ಈ ವೇಳೆ ಜಗ್ಗೇಶ್ ಅವರು ಲಾಕೆಟ್ನ ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆ. ‘ಕಾನೂನು ದೊಡ್ಡದು, ಅಧಿಕಾರಿಗಳು ಕೇಳಿದವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು, ಸಮಾಜ ಘಾತುಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲ, ಮಾಡೋದೂ ಇಲ್ಲ, ಪಾಚ್ಕೊಳಿ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ, ಒಳ್ಳೆಯ ಗುಣ, ನಡತೆ ಇದ್ದಾಗ ಕೊಲ್ಲೋಕೆ ಸಾವಿರಮಂದಿ ಬಂದರೂ ಕಾಯಲು ಒಬ್ಬ ಬರುತ್ತಾನೆ ಅವನೇ ದೇವರು. ಬದುಕಲ್ಲಿ ಸಾಧ್ಯವಾದರೆ ಒಬ್ಬರಿಗೆ ಒಳ್ಳೆಯದನ್ನು ಮಾಡಿ. ಅನ್ಯರಿಗೆ ಕೆಡುಕುಬಯಸಿ ಬಾಳಿದರೆ ನಾಶ’ ಎಂದು ಅವರು ಬರೆದಿದ್ದಾರೆ.