ಬೆಂಗಳೂರು: ಹುಲಿ ಉಗುರು ಧರಿಸಿದವರ ವಿರುದ್ಧ ಈವರೆಗೆ 8 ದೂರು ಬಂದಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ವನ್ಯಜೀವಿಗಳ ಚರ್ಮ, ಉಗುರು ಧರಿಸುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಯಾವುದೇ ವನ್ಯಜೀವಿ ಉತ್ಪನ್ನ ಸಂಗ್ರಹಣೆ, ಸಾಗಾಣಿಕೆ, ದಾಸ್ತಾನು ಮತ್ತು ಬಳಕೆ ಶಿಕ್ಷಾರ್ಹ ಅಪರಾಧ ಎಂದರು.
ಇನ್ನು ರಿಯಾಲಿಟಿ ಶೋದಲ್ಲಿ ಹುಲಿ ಉಗುರು ಧರಿಸಿದ್ದ ವಿಚಾರದಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ದೂರು ಬಂದ ಬೇರೆ ಕಡೆ ಕೂಡಾ ನಮ್ಮ ಅಧಿಕಾರಿಗಳು ಹೋಗಿ ಪರಿಶೀಲನೆ ನಡೆಸಿದ್ದಾರೆ. ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಪೂರ್ತಿ ಅರಿವು ಇಲ್ಲ ಎಂದು ನನಗೆ ಅನ್ನಿಸುತ್ತಿದೆ ಎಂದಿದ್ದಾರೆ. ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಮರಳಿಸಲು ಕೊನೆಯ ಒಂದು ಅವಕಾಶ ನೀಡಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ಇದೆ ಎಂದು ತಿಳಿಸಿದ್ದಾರೆ.