ಬೆಂಗಳೂರು: ಹೆಚ್ಚುವರಿ ಡಿಸಿಎಂಗಳು ಬೇಕೆಂದು ಹೇಳುತ್ತಿರುವವರು ಮಾಧ್ಯಮಗಳ ಮುಂದೆ ಅವಲತ್ತುಕೊಳ್ಳದೆ ಪಕ್ಷದ ಹೈಕಮಾಂಡ್ ಇಲ್ಲವೇ ಸಿಎಲ್ ಪಿ ಮುಂದೆ ಹೋಗಿ ತಮ್ಮ ಬೇಡಿಕೆಯನ್ನಿಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಅವರನ್ನು ಡಿಸಿಎಂ ಮಾಡಲಾರವು. ಹೆಚ್ಚುವರಿ ಡಿಸಿಎಂ ಬೇಡಿಕೆಯೇ ಹಾಸ್ಯಾಸ್ಪದ ಅನಿಸುತ್ತದೆ. ಒಬ್ಬ ಸಿಎಂರನ್ನು ಬಿಟ್ಟು ಮಿಕ್ಕವರೆಲ್ಲ ಡಿಸಿಎಂಗಳಾಗಲಿ, ಆಗ ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ ಎಂದು ಹೆಚ್ಚುವರಿ ಡಿಸಿಎಂಗಳನ್ನು ನೇಮಕ ಮಾಡಬೇಕೆಂದು ಬೇಡಿಕೆ ಇಡುತ್ತಿರುವ ತಮ್ಮ ಪಕ್ಷದ ಕೆಲ ನಾಯಕರ ವಿರುದ್ಧ ಕಿಡಿ ಕಾರಿದರು.
ಮೊನ್ನೆಯಷ್ಟೆ ಲೋಕಸಭಾ ಚುನಾವಣೆ ಮುಗಿದಿದೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆಕ್ಕಿಂತ 4-5 ಸ್ಥಾನಗಳು ಕಡಿಮೆ ಸಿಕ್ಕಿವೆ. ಚುನಾವಣೆಯಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ ಸಚಿವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಎಷ್ಟು ಸಚಿವರು ತಮಗೆ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.