ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಕಡ್ಡಾಯ.! ಸರಕಾರದ ಮಹತ್ವದ ಆದೇಶ.!

ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿಯನ್ನು ಅಳವಡಿಸೋ ಸಂಬಂಧ ಅಧಿಕೃತವಾಗಿ ಗೆಜೆಟ್ ಅಧಿಸೂಚನೆಯಲ್ಲಿ ಆದೇಶ ಪ್ರಕಟಿಸಲಾಗಿದೆ.

ಈ ಸಂಬಂಧ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್ ಡಿ ಅವರು ಗೆಜೆಟ್ ಅಧಿಸೂಚನೆಯಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯ ಸರ್ಕಾರದ ಕಛೇರಿಗಳಲ್ಲಿನ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿ, ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳುವುದು ಸರ್ಕಾರದ ಇತ್ತೀಚಿನ ಅಂಗೀಕೃತ ಕಾರ್ಯನೀತಿಯಾಗಿರುತ್ತದೆ ಎಂದಿದ್ದಾರೆ.

ದಿನಾಂಕ: 21.12.2023 ರಂದು ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನೀತಿಯನ್ನು ಜಾರಿಗೊಳಿಸಲು ನಿರ್ಣಯಿಸಲಾಗಿದೆ. ಆದುದರಿಂದ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುವ ಎಲ್ಲಾ ಹೊರಗುತ್ತಿಗೆ ನೇಮಕಾತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮವನ್ನು ಈ ಕೆಳಕಂಡ ಸೂಚನೆಗಳೊಂದಿಗೆ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

Advertisement

 

  1. ಹೊರಗುತ್ತಿಗೆ ಮೀಸಲಾತಿಯು ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ.
  2. ಪ್ರತಿ ವರ್ಷವು ಹೊರ ಸಂಪನ್ಮೂಲ ಏಜೆನ್ಸಿಗಳಿಂದ ಕೆ.ಟಿ.ಪಿ.ಪಿ ಅಧಿನಿಯಮ 1999 ರಂತೆ ಟೆಂಡರ್ ಕರೆಯುವಾಗ ಕಡ್ಡಾಯವಾಗಿ ಮೀಸಲಾತಿಯಂತೆ ಸಿಬ್ಬಂದಿಗಳನ್ನು ಪಡೆಯಲು ಷರತ್ತುಗಳನ್ನು ನಮೂದಿಸುವುದು.
  3. ಹೊರಗುತ್ತಿಗೆ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿದ ಮೀಸಲಾತಿ ಪ್ರಮಾಣದಲ್ಲಿ ಕನಿಷ್ಠ ಶೇಕಡ 33 ರಷ್ಟು ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳತಕ್ಕದ್ದು.
  4. ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಕಡ್ಡಾಯವಾಗಿ ಹೊರ ಸಂಪನ್ಮೂಲ ಏಜೆನ್ಸಿಯು ಅಂತಿಮಗೊಳಿಸಿದ ಸಿಬ್ಬಂದಿಗಳ ಪಟ್ಟಿ ಮೀಸಲಾತಿಯಂತೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು. ಜಾತಿ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳನ್ನು ಹೊರ ಸಂಪನ್ಮೂಲ ಏಜೆನ್ಸಿಯು ಪಡೆದು ನಿರ್ವಹಿಸತಕ್ಕದ್ದು, ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಈ ಬಗ್ಗೆ ಪರಿಶೀಲಿಸಿ ಕಾರ್ಯಾದೇಶವನ್ನು ನೀಡಲು ಕ್ರಮವಹಿಸುವುದು. (ಸಿಂಧುತ್ವ ಪ್ರಮಾಣ ಪತ್ರದ ಅಗತ್ಯವಿರುವುದಿಲ್ಲ)
  5. ಒಂದು ವೇಳೆ ನೇಮಕಾತಿಗೊಂಡ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ | ಅರ್ಧದಲ್ಲಿ ಬಿಟ್ಟಿದಲ್ಲಿ ಅಂತಹ ಖಾಲಿ ಉಳಿಯುವ ಸ್ನಾನವನ್ನು ಭರ್ತಿ ಮಾಡಲು ಅದೇ ಪ್ರವರ್ಗದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅಭ್ಯರ್ಥಿಗಳನ್ನು ಒದಗಿಸುವ ಏಜೆನ್ಸಿಯು ಕ್ರಮ ಕೈಗೊಳ್ಳತಕ್ಕದ್ದು.
  6. ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿಯನ್ನು ಜಾರಿಗೊಳಿಸತಕ್ಕದ್ದು.
  7. ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಅಭ್ಯರ್ಥಿಯ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 60 ವರ್ಷಗಳಾಗಿರತಕ್ಕದ್ದು.
  8. ಸಾಮಾಜಿಕ ನ್ಯಾಯ ಮತ್ತು ಸಮಾನ ಉದ್ಯೋಗಾವಕಾಶಗಳನ್ನು ಒದಗಿಸುವ ದೃಷ್ಟಿಯಿಂದ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿಯನ್ನು

ಅಳವಡಿಸುತ್ತಿರುವುದರಿಂದ ಯಾವುದೇ ಕಾರಣಕ್ಕಾಗಿ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಲು ಪರಿಗಣಿಸತಕ್ಕದ್ದಲ್ಲ.

 

ಈ ಮೇಲಿನ ಸೂಚನೆಗಳು ಸರ್ಕಾರದ ಎಲ್ಲಾ ಇಲಾಖೆಗಳು | ಸ್ವಾಯತ್ತ ಸಂಸ್ಥೆಗಳು / ನಿಗಮಗಳು / ಮಂಡಳಿಗಳು / ವಿಶ್ವವಿದ್ಯಾನಿಲಯಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement