ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್‌ವೊಂದು ಹೊರಬಿದ್ದಿದೆ. ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೇಣುಕಾ ಸ್ವಾಮಿ ಕೊಲೆಯಾಗಿದ್ದರೂ, ಅದನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಂದು ಎಸೆದಿದ್ದೇಕೆ ಎಂಬುದರ ಹಿಂದೆ ಕೈವಾಡ ಅಡಗಿದೆ ಎಂದು ತಿಳಿದು ಬಂದಿದೆ. ಹೌದು, ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರಾ? ರೇಣುಕಾಸ್ವಾಮಿ ಕೊಲೆಯಾದ ಬಳಿಕ ಆರೋಪಿಗಳು ಪಿಎಸ್ಐಗೆ ಕರೆ ಮಾಡಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ.
ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿ ಹಾಕಬೇಡ ಎಂದು ಪಿಎಸ್‌ಐ ಹೇಳಿದ್ದರಂತೆ. ಆರ್ ಆರ್ ನಗರದಲ್ಲಿ ನಡೆದ ಕೊಲೆ ನಂತ್ರ ಮೃತ ದೇಹವನ್ನು ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ದು ಯಾಕೆ? ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರ ಸೂಚನೆ ಪ್ರಕಾರ ಮೃತದೇಹವನ್ನು ಕಾಮಾಕ್ಷಿ ಪಾಳ್ಯಕ್ಕೆ ತಂದು ಎಸೆದು, ಓರ್ವ ಪೊಲೀಸ್ ಅಧಿಕಾರಿ ಜೊತೆಗೆ ಕೊಲೆ ಆರೋಪಿಗಳು ಮಾತುಕತೆ ನಡೆಸಿದ್ದರು ಎನ್ನಲಾಗಿದೆ.
ಇನ್ನು, ದರ್ಶನ್ ಹೆಸರು ತಪ್ಪಿಸಲು ದೊಡ್ಡ ಮೊತ್ತಕ್ಕೆ ಮಾತುಕತೆ ನಡೆದಿತ್ತು ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ A 13 ಆರೋಪಿ ದೀಪಕ್ ಪ್ರಭಾವಿ ರಾಜಕಾರಣಿ ಸಂಬಂಧಿಕನಾಗಿದ್ದು, ಈತನನ್ನೂ ಕೇಸ್‌ನಿಂದ ಹೊರಗಿಡಲು ಪ್ರಯತ್ನಗಳು ನಡೆದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಆತನ ಫೋಟೋ ಸಹ ಹೊರ ಬಾರದಂತೆ ವ್ಯವಸ್ಥೆ ಮಾಡಲಾಗಿತ್ತು. ವ್ಯವಸ್ಥಿತವಾಗಿ ದೀಪಕ್‌ನನ್ನು ಅಪ್ರೂವರ್ ಮಾಡಿಕೊಂಡು ಕೇಸ್‌ನಿಂದ ಕೈ ಬಿಡುವ ಪ್ಲಾನ್ ಮಾಡಿ ಇದಕ್ಕಾಗಿ ಐದು ಕೋಟಿ ರೂಪಾಯಿಗೆ ಡೀಲ್ ಪೊಲೀಸರು ನಡೆಸಿದ್ದರು ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೇ, ಮರಣೋತ್ತರ ವರದಿಯನ್ನು ತಿದ್ದಿ ಹೃದಯಾಘಾತ ಎಂದು ಬರೆದುಕೊಡಲು ವೈದ್ಯರ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಲಾಗಿದೆ.