ಹೊಸಪೇಟೆ: ಹೊಸಪೇಟೆ ನಗರಸಭೆಯಿಂದ 2023-24ನೇ ಸಾಲಿನ ವಿವಿಧ ಕಾರ್ಯಕ್ರಮದಡಿ ಅರ್ಜಿ ಆಹ್ವಾನಿಸಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ನಿರುದ್ಯೋಗಿ ಮಹಿಳಾ ಮತ್ತು ಪುರುಷ ಫಲಾನುಭವಿಗಳಿಗೆ ಕೇಂದ್ರ ಪುರಸ್ಕೃತ ಯೋಜನೆಯಡಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಡಿಯಲ್ಲಿ ಉಪಘಟಕವಾದ ಉದ್ಯೋಗ (ಶೇ.7ರ ಮೇಲೆ ಬಡ್ಡಿ ಸಹಾಯಧನ), ಸ್ವಯಂ ಉದ್ಯೋಗ ಕಾರ್ಯಕ್ರಮ (ಗುಂಪು) ಹಾಗೂ ಸ್ವ-ಸಹಾಯ ಗುಂಪುಗಳ ರಚನೆಯ ಕಾರ್ಯಕ್ರಮದಡಿ ಸೌಲಭ್ಯ ಒದಗಿಸಲಾಗುತ್ತಿದೆ.
*ಮಂಜೂರು ಮಾಡುವ ಸಹಾಯಧನ:* ವೈಯಕ್ತಿಕವಾಗಿ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಒಟ್ಟು ಯೋಜನಾ ವೆಚ್ಚ ರೂ.2 ಲಕ್ಷ ಇರುತ್ತದೆ. ವೈಯಕ್ತಿಕ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಉದ್ಯೋಗದ ಸ್ಥಾಪನೆಗಾಗಿ ಬ್ಯಾಂಕ್ ಸಾಲದ ಮೇಲೆ ಬಡ್ಡಿದರ (ಶೇ.7ಕ್ಕಿಂತ ಮೇಲೆ ಬಡ್ಡಿ ಸಹಾಯ ಧನ) (ಇಂಟರೆಸ್ಟ್ ಸಬ್ಸಿಡಿ ವೆಬ್ ಪೋಸ್ಟಲ್ ಮೂಲಕ) ದೊರೆಯುತ್ತದೆ. ಈ ಇಂಟರೆಸ್ಟ್ ಸಬ್ಸಿಡಿಯನ್ನು ಕಾಲಕಾಲಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸುವ ವ್ಯಕ್ತಿಗಳಿಗೆ ಮಾತ್ರ ನೀಡಲಾಗುವುದು.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿದ್ದು, ಕುಟುಂಬದ ವಾರ್ಷಿಕ ಆದಾಯ ರೂ. 23,214 ಹೊಂದಿರಬೇಕು. 18 ರಿಂದ 45 ವರ್ಷದೊಳಗಿರಬೇಕು. ಸ್ವಯಂ ಉದ್ಯೋಗ ಮಾಡಲು ಆಸಕ್ತಿ ಹೊಂದಿರಬೇಕು. ಯಾವುದೇ ಬ್ಯಾಂಕ್ ನಲ್ಲಿ ಸಾಲ ಹೊಂದಿರಬಾರದು. ಮಂಜೂರಾದ ಸಾಲವನ್ನು ಕಡ್ಡಾಯವಾಗಿ ಮೂರು ವರ್ಷದಲ್ಲಿ ಪಾವತಿಸುವ ಅರ್ಹತೆ ಹೊಂದಿರಬೇಕು. ಯೋಜನೆಯಡಿ 41 ಗುರಿ ನಿಗದಿತಪಡಿಸಲಾಗಿದೆ.
ಆಸಕ್ತರು ಪ್ರಸ್ತಕ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಯೋಜನಾ ವರದಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ಕೈಗೊಳ್ಳುವ ಉದ್ಯೋಗದ ಬಗ್ಗೆ ತರಬೇತಿ ಪಡೆದ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ, ರೂ.20 ಛಾಪಾ ಕಾಗದ ಮೇಲೆ ನಲ್ಮ್ ಯೋಜನೆಯ ಘೋಷಣಾ ಪ್ರಮಾಣ ಪತ್ರವನ್ನು ನೋಟರಿಯಿಂದ ದೃಢೀಕರಿಸಿದ ಪ್ರತಿ, ವ್ಯಯಕ್ತಿಕ ಉಳಿತಾಯ ಖಾತೆಯ ಬ್ಯಾಂಕ್ ಪಾಸ್ ಬುಕ್ ಪ್ರತಿಯೊಂದಿಗೆ ನ.21ರ ಒಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಖುದ್ದಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿಯೊಂದಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ವಾರ್ಡ್ ವಾರು ನಿಗದಿಪಡಿಸಿದೆ ಸೇವಾ ವಲಯದ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಪ್ರತಿ ಲಗತ್ತಿಸಬೇಕು. ವಾರ್ಡ್ ವಾರು ನಿಗದಿಪಡಿಸಿದ ಸೇವಾ ವಲಯದ ಬ್ಯಾಂಕ್ ಗಳಿಗೆ ಮಾತ್ರ ಅರ್ಜಿಗಳನ್ನು ಕಳುಹಿಸಲಾಗುವುದು. ಅಪೂರ್ಣವಾಗಿ ಭರ್ತಿಮಾಡಲಾದ ಹಾಗೂ ದೃಢೀಕೃತ ದಾಖಲೆಗಳಿಲ್ಲದ ಮತ್ತು ತಡವಾಗಿ ಬಂದಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಗರಸಭೆಯ ಸಿ.ಎ.ಓ (ಸಮುದಾಯ ವ್ಯವಹಾರ ಅಧಿಕಾರಿ) ಇವರನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.